ಚಂದ್ರವಳ್ಳಿ ನ್ಯೂಸ್, ಲಖನೌ:
ಉತ್ತರ ಪ್ರದೇಶದಲ್ಲಿ ಸೀಟು ಹಂಚಿಕೆ ಮಾತುಕತೆಗಳು ಅಂತಿಮಗೊಳ್ಳುವ ಮುನ್ನವೇ ಸಮಾಜವಾದಿ ಪಕ್ಷ (ಎಸ್ಪಿ) ಗುರುವಾರ ತನ್ನ ಪ್ರತ್ಯೇಕ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿರುವುದು ಮೈತ್ರಿ ಪಕ್ಷವಾದ ಕಾಂಗ್ರೆಸ್ನ ಅಸಮಾಧಾನಕ್ಕೆ ಕಾರಣವಾಗಿದೆ.
ಉತ್ತರ ಪ್ರದೇಶ ಕಾಂಗ್ರೆಸ್ ಉಸ್ತುವಾರಿ ರಾಜೇಂದ್ರ ಪಾಲ್ ಗೌತಮ್ ಮಾತನಾಡಿ, ಸೀಟು ಹಂಚಿಕೆ ಕುರಿತು ಚರ್ಚೆ ನಡೆಯುತ್ತಿರುವಾಗಲೇ ಪ್ರತ್ಯೇಕ ಘೋಷಣೆ ಮಾಡುವ ಆತುರ ಏನಿತ್ತು ಎಂದು ಪ್ರಶ್ನಿಸಿದ್ದಾರೆ. ಮೈತ್ರಿ ಅಂತಿಮಗೊಂಡರೆ ಜಂಟಿ ಪ್ರಣಾಳಿಕೆ ಬಿಡುಗಡೆ ಮಾಡಲಾಗುವುದು, ಇಲ್ಲವಾದಲ್ಲಿ ಕಾಂಗ್ರೆಸ್ ತನ್ನದೇ ಆದ ಪ್ರಣಾಳಿಕೆಯನ್ನು ಪ್ರಕಟಿಸಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಮೈತ್ರಿ ಮಾತುಕತೆಗೆ ಧಕ್ಕೆಯಾಗುವಂತಹ ಹೇಳಿಕೆಗಳನ್ನು ನೀಡದಂತೆ ಉಭಯ ಪಕ್ಷಗಳ ನಾಯಕರಿಗೆ ಅವರು ಮನವಿ ಮಾಡಿದ್ದಾರೆ.
ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಸಹ ಮೈತ್ರಿಕೂಟದ ಸಮನ್ವಯದ ಬಗ್ಗೆ ಪ್ರಶ್ನಿಸಿದ್ದು, ಪ್ರಣಾಳಿಕೆ ಬಿಡುಗಡೆಗೆ ಕಾಂಗ್ರೆಸ್ಗೆ ಆಹ್ವಾನವಿರಲಿಲ್ಲ ಎಂದಿದ್ದಾರೆ. ಆದರೆ, ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ಆರಾಧನಾ ಮಿಶ್ರಾ 'ಮೋನಾ' ಈ ಬೆಳವಣಿಗೆಯನ್ನು ಸಮರ್ಥಿಸಿಕೊಂಡಿದ್ದು, ಪ್ರತಿಯೊಂದು ಪಕ್ಷಕ್ಕೂ ತನ್ನದೇ ಆದ ಪ್ರಣಾಳಿಕೆ ಬಿಡುಗಡೆ ಮಾಡುವ ಹಕ್ಕಿದೆ ಎಂದು ಹೇಳಿದ್ದಾರೆ.




