ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್ಡಿಒ) ಅಧೀನದಲ್ಲಿರುವ ವೈಮಾನಿಕ ಅಭಿವೃದ್ಧಿ ಸಂಸ್ಥೆಯ (ಎಡಿಎ) ಗ್ರೇಡ್ 'ಎಫ್' ಹಿರಿಯ ವಿಜ್ಞಾನಿಯೊಬ್ಬರು ತೀವ್ರ ಕೆಲಸದ ಒತ್ತಡದಿಂದಾಗಿ ಆತ್ಮಹತ್ಯೆಗೆ ಶರಣಾಗಿರುವ ದಃಖದ ಘಟನೆ ನಗರದ ಸೀಗೆಹಳ್ಳಿಯಲ್ಲಿ ನಡೆದಿದೆ.
ಮೃತರನ್ನು ಎಡಿಎಯ ಪ್ರೋಗ್ರಾಮಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಶರದ್ ಕಟಿಯಾರ್ (47) ಎಂದು ಗುರುತಿಸಲಾಗಿದೆ. ಅಕ್ಟೋಬರ್ 21ರ ಸಂಜೆ 7:30 ರಿಂದ 8 ಗಂಟೆಯ ಸುಮಾರಿಗೆ ಇವರು ತಾವು ವಾಸವಿದ್ದ ಅಪಾರ್ಟ್ಮೆಂಟ್ನ ನಾಲ್ಕನೇ ಅಂತಸ್ತಿನ ಮೆಟ್ಟಿಲುಗಳಿಂದ ಜಿಗಿದು ಸಾವನ್ನಪ್ಪಿದ್ದಾರೆ.
ಕಳೆದ ಒಂದು ತಿಂಗಳಿಗೂ ಹೆಚ್ಚು ಕಾಲದಿಂದ ಶರದ್ ಅವರು ಉದ್ಯೋಗ ಕ್ಷೇತ್ರದಲ್ಲಿ ತೀವ್ರ ಕೆಲಸದ ಒತ್ತಡ ಹಾಗೂ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಘಟನೆ ನಡೆದ ದಿನದಂದೂ ಸಹ ಅವರು ನಿಮ್ಹಾನ್ಸ್ ಆಸ್ಪತ್ರೆಗೆ ತೆರಳಿ ವೈದ್ಯಕೀಯ ಸಲಹೆ ಹಾಗೂ ಔಷಧಗಳನ್ನು ಪಡೆದುಕೊಂಡು ಬಂದಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಈ ಕುರಿತು ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಸೆಕ್ಷನ್ 194ರ ಅಡಿಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದ್ದು, ಕೆಲಸದ ಸ್ಥಳದಲ್ಲಿದ್ದ ಒತ್ತಡದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



