ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವೈಟ್ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಕೀಲರೊಬ್ಬರ ಮೇಲೆ ದುಷ್ಕರ್ಮಿಗಳು ಗುಂಡಿಟ್ಟು ಬರ್ಬರವಾಗಿ ಹತ್ಯೆಗೈದಿರುವ ದಾರುಣ ಘಟನೆ ವರದಿಯಾಗಿದೆ.
ಪಟ್ಟಂದೂರು ಅಗ್ರಹಾರದ ನಿವಾಸಿ ಮಂಜುನಾಥ್ (42) ಮೃತಪಟ್ಟ ದುರ್ದೈವಿ. ಭಾನುವಾರ ರಾತ್ರಿ 11:30 ರಿಂದ 12 ಗಂಟೆಯ ಸುಮಾರಿಗೆ ಈ ಕೃತ್ಯ ನಡೆದಿದೆ.
ಘಟನೆಯ ವಿವರ: ಮಂಜುನಾಥ್ ಅವರ ಮನೆಗೆ ರಾತ್ರಿ ವೇಳೆ ಬಂದಿಳಿದ ಇಬ್ಬರು ಹಂತಕರು ಬಾಗಿಲು ಬಡೆದಿದ್ದಾರೆ. ಮಂಜುನಾಥ್ ಅವರು ಬಾಗಿಲು ತೆಗೆದ ತಕ್ಷಣ, ಯಾವುದೇ ಮುನ್ಸೂಚನೆ ನೀಡದೆ ನೇರವಾಗಿ ಅವರ ಹಣೆಗೆ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆಗೆ ಹಣಕಾಸಿನ ವೈಮನಸ್ಸು ಶಂಕೆ: ಪ್ರಾಥಮಿಕ ಮಾಹಿತಿಯ ಪ್ರಕಾರ, ಮಂಜುನಾಥ್ ಅವರು ವೈಟ್ಫೀಲ್ಡ್ ಭಾಗದಲ್ಲಿ ಹೊಂದಿದ್ದ ಜಮೀನನ್ನು ಶೆಡ್ಗಳಿಗೆ ಬಾಡಿಗೆಗೆ ನೀಡಿದ್ದರು. ಕೊಲೆಗೈದ ಆರೋಪಿಗಳೇ ಈ ಜಮೀನನ್ನು ಬಾಡಿಗೆಗೆ ಪಡೆದಿದ್ದರು ಎನ್ನಲಾಗಿದೆ. ಕೃತ್ಯ ನಡೆಯುವುದಕ್ಕೂ ಕೇವಲ ಒಂದು ಗಂಟೆ ಮುಂಚೆ ಬಾಡಿಗೆ ಹಣ ಪಾವತಿಸುವ ವಿಚಾರವಾಗಿ ಮಂಜುನಾಥ್ ಹಾಗೂ ಆರೋಪಿಗಳ ನಡುವೆ ತೀವ್ರ ವಾಗ್ವಾದ ನಡೆದಿತ್ತು. ಈ ಹಣಕಾಸಿನ ವೈಮನಸ್ಸು ಹಾಗೂ ಜಮೀನು ವ್ಯಾಜ್ಯವೇ ಈ ಭೀಕರ ಹತ್ಯೆಗೆ ಪ್ರಮುಖ ಕಾರಣವಾಗಿರಬಹುದು ಎಂದು ಪೊಲೀಸರು ಬಲವಾಗಿ ಶಂಕಿಸಿದ್ದಾರೆ.
ತನಿಖೆ ಚುರುಕು: ವಿಷಯ ತಿಳಿದ ಕೂಡಲೇ ವೈಟ್ಫೀಲ್ಡ್ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ತಲೆಮರೆಸಿಕೊಂಡಿರುವ ಹಂತಕರ ಪತ್ತೆಗಾಗಿ ಪೊಲೀಸರು ವಿಶೇಷ ಬಲೆ ಬೀಸಿದ್ದು, ತೀವ್ರ ಹುಡುಕಾಟ ನಡೆಸುತ್ತಿದ್ದಾರೆ ಎಂದು ವೈಟ್ಫೀಲ್ಡ್ ವಿಭಾಗದ ಡಿಸಿಪಿ ಸೈದುಲು ಅಡಾವತ್ ಮಾಹಿತಿ ನೀಡಿದ್ದಾರೆ.



