ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ರಕ್ಷಣಾ ತಂತ್ರಜ್ಞಾನ ಕ್ಷೇತ್ರಕ್ಕೆ ಮತ್ತಷ್ಟು ಬಲ ತುಂಬುವ ನಿಟ್ಟಿನಲ್ಲಿ ಪ್ರಮುಖ ಬೆಳವಣಿಗೆ ನಡೆದಿದ್ದು, ಬೆಂಗಳೂರು ಮೂಲದ ಸ್ವದೇಶಿ ರಕ್ಷಣಾ ತಂತ್ರಜ್ಞಾನ ಸಂಸ್ಥೆಯಾದ ‘ಟೋನ್ಬೊ ಇಮೇಜಿಂಗ್ ಇಂಡಿಯಾ ಲಿಮಿಟೆಡ್’ ಬೆಂಗಳೂರು ಹಾಗೂ ವಿಜಯಪುರದ ಮುಳವಾಡ ಕೈಗಾರಿಕಾ ಪ್ರದೇಶದಲ್ಲಿ ಭಾರೀ ಹೂಡಿಕೆ ಮಾಡಲು ಆಸಕ್ತಿ ವ್ಯಕ್ತಪಡಿಸಿದೆ.
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರೊಂದಿಗೆ ಸಭೆ ನಡೆಸಿದ ಸಂಸ್ಥೆಯ ಮುಖ್ಯಸ್ಥರು, ಕರ್ನಾಟಕದಲ್ಲಿ ಅತ್ಯಾಧುನಿಕ ರಕ್ಷಣಾ ತಂತ್ರಜ್ಞಾನ ಕ್ಷೇತ್ರದಲ್ಲಿ ಹೂಡಿಕೆ ಹಾಗೂ ಉತ್ಪಾದನಾ ಘಟಕಗಳ ಸ್ಥಾಪನೆ ಕುರಿತು ವಿಸ್ತೃತ ಚರ್ಚೆ ನಡೆಸಿದರು.
ಸಂಸ್ಥೆಯಿಂದ 2 ಮಹತ್ವದ ಪ್ರಸ್ತಾವನೆ: ಬೆಂಗಳೂರಿನಲ್ಲಿ ಅತ್ಯಾಧುನಿಕ ಉತ್ಪಾದನಾ ಘಟಕ: ಬೆಂಗಳೂರಿನ ಐಟಿಐಆರ್ 2ನೇ ಹಂತದಲ್ಲಿ 5 ಎಕರೆ ಪ್ರದೇಶದಲ್ಲಿ ‘ಹೈ-ಪವರ್ ಮೈಕ್ರೋವೇವ್’ (HPM) ತಂತ್ರಜ್ಞಾನದ ವಿನ್ಯಾಸ ಮತ್ತು ಉತ್ಪಾದನಾ ಘಟಕ ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ.
ವಿಜಯಪುರದಲ್ಲಿ 130 ಎಕರೆ ವಿಸ್ತೀರ್ಣದ ಪರೀಕ್ಷಾ ಘಟಕ: ವಿಜಯಪುರ ಜಿಲ್ಲೆಯ ಮುಳವಾಡ ಕೈಗಾರಿಕಾ ಪ್ರದೇಶದ 130 ಎಕರೆ ಜಾಗದಲ್ಲಿ ಹೈ-ಪವರ್ ಮೈಕ್ರೋವೇವ್ ಹಾಗೂ ಮುಂದಿನ ತಲೆಮಾರಿನ ‘ಡೈರೆಕ್ಟೆಡ್ ಎನರ್ಜಿ’ ತಂತ್ರಜ್ಞಾನಗಳ ಪರೀಕ್ಷೆ, ಮೌಲ್ಯಮಾಪನ, ಕ್ಷೇತ್ರ ಪ್ರಯೋಗ ಮತ್ತು ಪ್ರಾತ್ಯಕ್ಷಿಕೆಗಳಿಗಾಗಿ ಅತ್ಯಾಧುನಿಕ ಘಟಕ ಸ್ಥಾಪಿಸಲು ಆಸಕ್ತಿ ವಹಿಸಲಾಗಿದೆ.
ಕೌಂಟರ್-ಡ್ರೋನ್ ತಂತ್ರಜ್ಞಾನಕ್ಕೆ ಹೊಸ ವೇಗ: ವಿಶೇಷವಾಗಿ, ಪ್ರಸ್ತುತ ಭದ್ರತಾ ಕ್ಷೇತ್ರದಲ್ಲಿ ಸವಾಲಾಗಿರುವ ಡ್ರೋನ್‌ಗಳು ಹಾಗೂ ಡ್ರೋನ್ ಸಮೂಹಗಳನ್ನು ಸಮರ್ಥವಾಗಿ ಎದುರಿಸುವ 'ಕೌಂಟರ್-ಡ್ರೋನ್' ತಂತ್ರಜ್ಞಾನ ಅಭಿವೃದ್ಧಿಗೆ ಈ ಘಟಕವು ಅತ್ಯಂತ ಮಹತ್ವದ ಕೊಡುಗೆ ನೀಡಲಿದೆ ಎಂದು ತಿಳಿಸಲಾಗಿದೆ.
ಈ ಎರಡೂ ಬೃಹತ್ ಯೋಜನೆಗಳನ್ನು ಸಾಕಾರಗೊಳಿಸಲು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (#KIADB) ಸೇರಿದಂತೆ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ, ನಿಯಮಾನುಸಾರ ಅಗತ್ಯ ಸೌಲಭ್ಯ ಹಾಗೂ ಸಹಕಾರ ಒದಗಿಸುವುದಾಗಿ ಸಚಿವ ಎಂ.ಬಿ. ಪಾಟೀಲ್ ಭರವಸೆ ನೀಡಿದ್ದಾರೆ.




