ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ನಗರದ ಟಿಬಿ ವೃತ್ತದ ಸಮೀಪದ ವೇದಾವತಿ ನಗರದ ಬ್ರಿಡ್ಜ್ ಪಕ್ಕದಲ್ಲಿರುವ ಅಂಬೇಡ್ಕರ್ ವೃತ್ತದಿಂದ ನಗರದೊಳಗೆ ಪ್ರವೇಶಿಸುವ ಪ್ರಮುಖ ತಿರುವಿನಲ್ಲಿರುವ ವಾಣಿವಿಲಾಸ ಜಲಾಶಯದ (ವಿವಿ ಸಾಗರ) ನಾಲೆಯ ಸೇತುವೆಯ ತಡೆಗೋಡೆ (ಕಟ್ಟೆ) ಒಡೆದು ಹೋಗಿ ಹಲವಾರು ತಿಂಗಳುಗಳೇ ಕಳೆದರೂ ಸಂಬಂಧಪಟ್ಟ ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ.
ಈ ತಿರುವು ಅತ್ಯಂತ ಪ್ರಮುಖ ಹಾಗೂ ಜನನಿಬಿಡ ರಸ್ತೆಯಾಗಿದ್ದು, ಚಳ್ಳಕೆರೆ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ ಹಾಗೂ ಹೊಸದುರ್ಗ ಭಾಗಗಳಿಗೆ ಸಂಚರಿಸುವ ನೂರಾರು ಸಾರ್ವಜನಿಕ ಸಾರಿಗೆ ಬಸ್ಗಳು, ಶಾಲಾ-ಕಾಲೇಜು ವಾಹನಗಳು ಸೇರಿದಂತೆ ದಿನನಿತ್ಯ ಸಾವಿರಾರು ವಾಹನಗಳು ಇದೇ ಮಾರ್ಗವಾಗಿ ಸಂಚರಿಸುತ್ತವೆ.
ಅಲ್ಲದೆ, ಈ ಅಪಾಯಕಾರಿ ರಸ್ತೆಯ ಪಕ್ಕದಲ್ಲೇ ಅಂಬೇಡ್ಕರ್ ಪದವಿ ಪೂರ್ವ ಕಾಲೇಜು ಹಾಗೂ ಗೌತಮ್ ಅಕಾಡೆಮಿ ಶಾಲೆಗಳಿದ್ದು, ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಆತಂಕದಲ್ಲೇ ಕಾಲನಡಿಗೆಯಲ್ಲಿ ಸಂಚರಿಸುವಂತಾಗಿದೆ.
ಈಗಾಗಲೇ ಈ ಸೇತುವೆ ಅತ್ಯಂತ ಕಿರಿದಾಗಿದ್ದು, ದಿನದಿಂದ ದಿನಕ್ಕೆ ವಾಹನ ದಟ್ಟಣೆಯೂ ಹೆಚ್ಚಾಗುತ್ತಿದೆ. ಯಾವುದೇ ತಡೆಗೋಡೆ ಇಲ್ಲದ ಕಾರಣ ಮುಖ್ಯವಾಗಿ ಸಂಜೆ ಹಾಗೂ ರಾತ್ರಿ ವೇಳೆಯಲ್ಲಿ ಸಂಚರಿಸುವ ಪಾದಚಾರಿಗಳಿಗೆ ಹಾಗೂ ಸವಾರರಿಗೆ ಈ ತಿರುವು ಸಾವಿನ ಕಂಟಕವಾಗಿ ಪರಿಣಮಿಸುವ ಸಾಧ್ಯತೆಯಿದೆ.
ಅನಾಹುತ ಸಂಭವಿಸಿದ ಮೇಲೆ ಎಚ್ಚೆತ್ತುಕೊಳ್ಳುವ ಬದಲು, ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಇಲಾಖೆಯ ಉನ್ನತಾಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಕೂಡಲೇ ಸೇತುವೆಯ ತಡೆಗೋಡೆಯನ್ನು ಪುನರ್ ನಿರ್ಮಿಸಿ ಸಂಭಾವ್ಯ ಅಪಾಯವನ್ನು ತಪ್ಪಿಸಬೇಕೆಂದು ಸಾರ್ವಜನಿಕರು ಮತ್ತು ಸ್ಥಳೀಯರು ತೀವ್ರವಾಗಿ ಒತ್ತಾಯಿಸಿದ್ದಾರೆ.
ಓದುಗರ ಪತ್ರ:ವೇಣುಕುಮಾರ್ ಎಂ., ಉಪನ್ಯಾಸಕರು, ಹಿರಿಯೂರು.



