ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಿಬಿರಾಮ್ಜಿ ಯೋಜನೆಯಡಿ ಅನುಷ್ಠಾನಗೊಳ್ಳುತ್ತಿರುವ ಕಾಮಗಾರಿಗಳ ಸ್ಥಳಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ಆಕಾಶ್ ಅವರು ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲ್ಲೂಕಿನ ಕೊಳಹಾಳ್, ಮುದ್ದಾಪುರ ಹಾಗೂ ಐನಹಳ್ಳಿ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕೆರೆ ಮತ್ತು ಗೋಕಟ್ಟೆ ಪುನಶ್ಚೇತನ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿದ ಸಿಇಒ, ಬಳಿಕ ಐನಹಳ್ಳಿ ಗ್ರಾ.ಪಂ.ವ್ಯಾಪ್ತಿಯಲ್ಲಿ ನಿರ್ಮಿಸಲಾಗುತ್ತಿರುವ ಕೊಳವೆಬಾವಿ ಮರುಪೂರಣ ಘಟಕ ಕಾಮಗಾರಿಯನ್ನೂ ವೀಕ್ಷಿಸಿದರು.
ಪರಿಶೀಲನೆ ವೇಳೆ ಸಿಇಒ ಡಾ. ಎಸ್. ಆಕಾಶ್ ಅವರು ಮೊಬೈಲ್ ಆಪ್ ಮೂಲಕ ಕೂಲಿಕಾರರ ಎನ್.ಎಂ.ಎಂ.ಎಸ್ ಆನ್ಲೈನ್ ಹಾಜರಾತಿಯನ್ನು ಪರಿಶೀಲಿಸಿದರು. ನಂತರ ಕೂಲಿಕಾರರ ಜಾಬ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಪುಸ್ತಕಗಳನ್ನು ಪರಿಶೀಲಿಸಿ, ಸಮಯಕ್ಕೆ ಸರಿಯಾಗಿ ಕೂಲಿ ಹಣ ಜಮೆಯಾಗುತ್ತಿದೆಯೇ ಎಂದು ವಿಚಾರಿಸಿದರು.
ಈ ವೇಳೆ ಕೂಲಿಕಾರರು ಸ್ಪಂದಿಸಿ, ನಮಗೆ ಸಮಯಕ್ಕೆ ಸರಿಯಾಗಿ ಕೂಲಿ ಹಣ ಪಾವತಿಯಾಗುತ್ತಿಲ್ಲ. ಕೂಡಲೇ ನಿಯಮಿತವಾಗಿ ಕೂಲಿ ಜಮೆಯಾಗುವಂತೆ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಿಇಒ, ತಾಂತ್ರಿಕ ಸಮಸ್ಯೆಯಿಂದಾಗಿ ಖಾತೆಗೆ ಕೂಲಿ ಹಣ ಜಮೆಯಾಗುವುದು ವಿಳಂಬವಾಗಿತ್ತು. ಸದ್ಯ ಈ ತಾಂತ್ರಿಕ ತೊಂದರೆ ಬಗೆಹರಿದಿದ್ದು, ಇನ್ಮುಂದೆ ಸರಿಯಾದ ಸಮಯಕ್ಕೆ ಖಾತೆಗೆ ಕೂಲಿ ಹಣ ಪಾವತಿಯಾಗಲಿದೆ ಎಂದು ಭರವಸೆ ನೀಡಿದರು.
ಬಳಿಕ ಕೂಲಿಕಾರರೊಂದಿಗೆ ಸಂವಾದ ನಡೆಸಿದ ಅವರು, ಒಂದು ಆರ್ಥಿಕ ವರ್ಷದಲ್ಲಿ ಪ್ರತಿ ಕುಟುಂಬಕ್ಕೆ 125 ದಿನಗಳ ಉದ್ಯೋಗ ಖಾತರಿ ನೀಡಲಾಗುತ್ತಿದೆ. ಲಿಂಗ ತಾರತಮ್ಯವಿಲ್ಲದೆ ಪುರುಷ ಮತ್ತು ಮಹಿಳೆಯರಿಗೆ ದಿನಕ್ಕೆ ರೂ. 382/- ಸಮಾನ ಕೂಲಿ ನೀಡಲಾಗುತ್ತದೆ. ಹೀಗಾಗಿ ಯಾರೂ ಕೆಲಸ ಅರಸಿ ನಗರಗಳಿಗೆ ಅಥವಾ ಬೇರೆ ಊರುಗಳಿಗೆ ಗುಳೆ ಹೋಗಬಾರದು. ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳಿಗೂ ಆದ್ಯತೆ ನೀಡಲಾಗಿದ್ದು, ಸಣ್ಣ ಮತ್ತು ಅತಿ ಸಣ್ಣ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಶೀಘ್ರದಲ್ಲೇ ವಿವಿಧ ಅನುಷ್ಠಾನ ಇಲಾಖೆಗಳ ಕಾಮಗಾರಿಗಳೂ ಪ್ರಾರಂಭವಾಗಲಿದ್ದು, ಅಲ್ಲೂ ಕೂಲಿಕಾರರು ಕೆಲಸ ಮಾಡಬಹುದು ಎಂದರು.
ಇದೇ ವೇಳೆ ಕೆಲಸದ ಸ್ಥಳದಲ್ಲಿದ್ದ ಪ್ರಥಮ ಚಿಕಿತ್ಸಾ ಪೆಟ್ಟಿಗೆಯನ್ನು ಪರಿಶೀಲಿಸಿದ ಅವರು, ಕೆಲಸ ನಿರ್ವಹಿಸುವಾಗ ಕೂಲಿಕಾರರಿಗೆ ಸಣ್ಣಪುಟ್ಟ ಗಾಯಗಳಾದರೆ ತಕ್ಷಣ ಪ್ರಥಮ ಚಿಕಿತ್ಸೆ ನೀಡಬೇಕು ಎಂದು ಸೂಚಿಸಿದರು. ಜೊತೆಗೆ ಸಕಾಲದಲ್ಲಿ ಕೂಲಿ ಹಣ ಜಮೆಯಾಗುವಂತೆ ಕ್ರಮ ವಹಿಸಲು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಈ ಪರಿಶೀಲನೆ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪ್ರಮೋದ್, ತಾಲ್ಲೂಕು ಸಹಾಯಕ ನಿರ್ದೇಶಕ (ವಿ.ಬಿ.ಗ್ರಾ) ಯರಿಸ್ವಾಮಿ, ಜಿಲ್ಲಾ ಪಂಚಾಯತಿಯ ಎಡಿಪಿಸಿ ಮೋಹನ್ ಕುಮಾರ್, ಜಿಲ್ಲಾ ಐಇಸಿ ಸಂಯೋಜಕ ರವೀಂದ್ರನಾಥ್, ತಾಲ್ಲೂಕು ತಾಂತ್ರಿಕ ಸಂಯೋಜಕರಾದ ರಮೇಶ್ ಹಾಗೂ ಶಶಿಧರ್, ತಾಲ್ಲೂಕು ಐಇಸಿ ಸಂಯೋಜಕ ಸತ್ಯನಾರಾಯಣ, ಸಂಬಂಧಪಟ್ಟ ಗ್ರಾಮ ಪಂಚಾಯತಿಗಳ ಪಿಡಿಒಗಳು, ಟಿಎಇ, ಬಿಎಫ್ಟಿ ಹಾಗೂ ಕಾಯಕಮಿತ್ರರು ಉಪಸ್ಥಿತರಿದ್ದರು.



