ಹೆಚ್.ತನುಶ್ರೀ, ಚಿತ್ರದುರ್ಗ.
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಕರ್ನಾಟಕ ರಾಜಕಾರಣದಲ್ಲಿ ಸಚಿವ ಸಂಪುಟ ಪುನಾರಚನೆ ಅಥವಾ ಬದಲಾವಣೆಯ ಚರ್ಚೆಗಳು ಮುನ್ನೆಲೆಗೆ ಬಂದಾಗಲೆಲ್ಲಾ ಹಿರಿಯ ಮತ್ತು ಸತತವಾಗಿ ಗೆದ್ದು ಬಂದ ಶಾಸಕರ ಹೆಸರುಗಳು ಕೇಳಿಬರುವುದು ಸಹಜ. ಅಂತಹ ಪ್ರಮುಖ ಹೆಸರುಗಳಲ್ಲಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ. ರಘುಮೂರ್ತಿ ಅವರ ಹೆಸರು ಮುಂಚೂಣಿಯಲ್ಲಿ ಬರುತ್ತದೆ.
ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಸರಳ ಸಜ್ಜನಿಕೆಯ ಪಕ್ಷ ನಿಷ್ಠೆಯ ಟಿ.ರಘುಮೂರ್ತಿ ಅವರು ಈ ಬಾರಿ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಅಲ್ಲದೆ ನಾಯಕ ಜನಾಂಗದ ಕೋಟಾದಡಿ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಎನ್ನುವ ಬಲವಾದ ನಂಬಿಕೆ ಸಮುದಾಯ ಸೇರಿದಂತೆ ಜಿಲ್ಲೆಯ ಜನರಲ್ಲಿದೆ.
ಅಭಿವೃದ್ಧಿ ಹರಿಕಾರ ಟಿ. ರಘುಮೂರ್ತಿ ಅವರ ಸಚಿವ ಸ್ಥಾನದ ನಿರೀಕ್ಷೆ, ಅದಕ್ಕಿರುವ ರಾಜಕೀಯ ಕಾರಣಗಳು ಮತ್ತು ಜಿಲ್ಲೆಯ ರಾಜಕೀಯ ಪರಿಸ್ಥಿತಿ ಅವರಿಗೆ ಮತ್ತಷ್ಟು ಸಚಿವ ಸ್ಥಾನ ಹತ್ತಿರವಾಗಿದೆ.
ಸತತ ಮೂರು ಬಾರಿ ಗೆಲುವಿನ ಹಿನ್ನೆಲೆ ಮತ್ತು ಪಕ್ಷನಿಷ್ಠೆ:
ಶಾಸಕ ಟಿ. ರಘುಮೂರ್ತಿ ಅವರು 2013, 2018 ಮತ್ತು 2023ರ ವಿಧಾನಸಭಾ ಚುನಾವಣೆಗಳಲ್ಲಿ ಚಳ್ಳಕೆರೆ (ಪರಿಶಿಷ್ಟ ಪಂಗಡ ಮೀಸಲು) ಕ್ಷೇತ್ರದಿಂದ ಸತತವಾಗಿ ಮೂರು ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಯಗಳಿಸಿದ್ದಾರೆ.
2018ರ ರಾಜಕೀಯ ಪರಿಸ್ಥಿತಿ: 2018ರ ವಿಧಾನಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಉಳಿದೆಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪರಾಭವಗೊಂಡಾಗ, ಜಿಲ್ಲೆಯಿಂದ ಆಯ್ಕೆಯಾಗಿದ್ದ ಏಕೈಕ ಕಾಂಗ್ರೆಸ್ ಶಾಸಕ ಟಿ. ರಘುಮೂರ್ತಿ. ಚಿತ್ರದುರ್ಗ ಜಿಲ್ಲೆಯಲ್ಲಿ ಆಯ್ಕೆಯಾದ ಏಕೈಕ ಕಾಂಗ್ರೆಸ್ ಶಾಸಕ ರಘುಮೂರ್ತಿ ಆಗಿದ್ದರು. ಅವರಿಗೆ ಜಿಲ್ಲಾ ಕೋಟಾದಡಿ ಸಚಿವ ಸ್ಥಾನ ಸಿಗುತ್ತದೆ ಎನ್ನುವ ಬಲವಾದ ನಂಬಿಕೆ ಇತ್ತು. ಆದರೆ ಆ ಸಮಯದಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವಿದ್ದಾಗಲೂ ಅವರಿಗೆ ಸಚಿವ ಸ್ಥಾನ ಸಿಕ್ಕಿರಲಿಲ್ಲ.
ಪಕ್ಷದ ಸಂಘಟನೆ: ರಾಹುಲ್ ಗಾಂಧಿ ಅವರ 'ಭಾರತ್ ಜೋಡೋ' ಯಾತ್ರೆಯು ಚಿತ್ರದುರ್ಗ ಜಿಲ್ಲೆಯಲ್ಲಿ ಹಾದುಹೋದಾಗ ಅದರ ಯಶಸ್ವಿ ಸಂಘಟನೆಯಲ್ಲಿ ರಘುಮೂರ್ತಿ ಅವರು ಪ್ರಮುಖ ಪಾತ್ರ ವಹಿಸಿದ್ದರು.
ಶಾಸಕ ಟಿ.ರಘುಮೂರ್ತಿ ಅವರು ಸದಾ ಪಕ್ಷದ ಶಿಸ್ತಿಗೆ ಒಳಪಟ್ಟು, ಯಾವುದೇ ಬಣ ರಾಜಕೀಯಕ್ಕೆ ಸಿಲುಕದೆ ಹೈಕಮಾಂಡ್ ನಿಷ್ಠರಾಗಿ ಗುರುತಿಸಿಕೊಂಡಿರುವುದು ಇವರಿಗೆ ಪ್ಲಸ್ ಪಾಯಿಂಟ್.
'ನಾಯಕ' ಸಮುದಾಯದ ಪ್ರಾತಿನಿಧ್ಯದ ಹಕ್ಕೊತ್ತಾಯ:
ರಾಜ್ಯ ಸಚಿವ ಸಂಪುಟದ ರಾಜಕೀಯ ಬೆಳವಣಿಗೆಗಳಲ್ಲಿ ಪರಿಶಿಷ್ಟ ಪಂಗಡ ನಾಯಕ ಸಮುದಾಯದ ಕೆಲವು ಸಚಿವರು ಸ್ಥಾನ ಕಳೆದುಕೊಂಡ ಹಿನ್ನೆಲೆಯಲ್ಲಿ, ಅದೇ ಸಮುದಾಯದ ಮತ್ತೊಬ್ಬ ಸಮರ್ಥ ನಾಯಕನಿಗೆ ಸಚಿವ ಸ್ಥಾನ ನೀಡಬೇಕು ಎಂಬ ಒತ್ತಡ ಸರ್ಕಾರದ ಮೇಲಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡದ ಮತದಾರರು ನಿರ್ಣಾಯಕ ಸಂಖ್ಯೆಯಲ್ಲಿದ್ದಾರೆ. ಜಿಲ್ಲೆಯ ಇತಿಹಾಸವನ್ನು ನೋಡಿದರೆ, ಈ ಹಿಂದೆ ಜನತಾ ಪರಿವಾರದಿಂದ ಮಾಜಿ ಸಚಿವ ತಿಪ್ಪೇಸ್ವಾಮಿ ಹಾಗೂ ಬಿಜೆಪಿಯಿಂದ ಬಿ. ಶ್ರೀರಾಮುಲು ಸಚಿವರಾಗಿದ್ದರು. ಆದರೆ ಇದುವರೆಗೆ ಕಾಂಗ್ರೆಸ್ ಪಕ್ಷದಿಂದ ಈ ಭಾಗದ ಎಸ್‌ಟಿ ಮೀಸಲು ಕ್ಷೇತ್ರದ ಶಾಸಕರಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಈಗ ಸಚಿವ ಸ್ಥಾನವನ್ನು ರಘುಮೂರ್ತಿ ಅವರಿಗೆ ನೀಡದಿದ್ದರೆ ಚಿತ್ರದುರ್ಗ ಜಿಲ್ಲೆಯ ಲಕ್ಷಾಂತರ ನಾಯಕ ಸಮುದಾಯದವರಿಗೆ ಸೇರಿದಂತೆ ಇಡೀ ಜಿಲ್ಲೆಗೆ ಕಾಂಗ್ರೆಸ್ ಪಕ್ಷ ಅನ್ಯಾಯ ಮಾಡಿದಂತಾಗಲಿದೆ.
ಈ ಹಿನ್ನೆಲೆಯಲ್ಲಿ ಟಿ. ರಘುಮೂರ್ತಿ ಅವರು ತಮಗೆ ಈ ಬಾರಿ ಅವಕಾಶ ನೀಡಬೇಕು ಎಂದು ಬಹಿರಂಗವಾಗಿಯೇ ತಮ್ಮ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯೊಳಗಿನ ಪೈಪೋಟಿ ಮತ್ತು ಸವಾಲುಗಳು:
ಚಿತ್ರದುರ್ಗ ಜಿಲ್ಲೆಗೆ ಸಚಿವ ಸ್ಥಾನ ಸಿಗಬೇಕೆಂಬ ಚರ್ಚೆಗಳು ಜೋರಾಗಿದ್ದರೂ, ಜಿಲ್ಲೆಯ ಕಾಂಗ್ರೆಸ್ ಶಾಸಕರ ನಡುವೆಯೇ ತೀವ್ರ ಪೈಪೋಟಿ ಇದೆ.
ಎನ್. ವೈ. ಗೋಪಾಲಕೃಷ್ಣ: ಮೊಳಕಾಲ್ಮುರು ಕ್ಷೇತ್ರದ ಹಿರಿಯ ಶಾಸಕ ಎನ್. ವೈ. ಗೋಪಾಲಕೃಷ್ಣ ಅವರೂ ಸಹ ನಾಯಕ ಸಮುದಾಯಕ್ಕೆ ಸೇರಿದ್ದು, ಅವರೂ ಸಚಿವ ಸ್ಥಾನದ ರೇಸ್‌ನಲ್ಲಿದ್ದರೂ ಅವರಿಗೆ ಸಚಿವ ಸ್ಥಾನ ಸಿಗುವುದು ಅನುಮಾನ ಎನ್ನಲಾಗುತ್ತಿದೆ.
ಬಿ. ಜಿ. ಗೋವಿಂದಪ್ಪ: ಹೊಸದುರ್ಗ ಶಾಸಕ ಬಿ. ಜಿ. ಗೋವಿಂದಪ್ಪ ಅವರು ತಮ್ಮ ಆರೋಗ್ಯದ ಕಾರಣಕ್ಕಾಗಿ ಬಹಿರಂಗವಾಗಿಯೇ ಶಾಸಕ ರಘುಮೂರ್ತಿ ಅವರಿಗೆ ಸಚಿವ ಸ್ಥಾನ ನೀಡಿ ಎನ್ನುತ್ತಿದ್ದಾರೆ ಎನ್ನಲಾಗಿದೆ. ಹಾಗೂ ಚಿತ್ರದುರ್ಗ ಶಾಸಕ ಕೆ. ಸಿ. ವೀರೇಂದ್ರ ಪಪ್ಪಿ ಅವರ ಬೆಂಬಲಿಗರೂ ಸಹ ಸಚಿವ ಸ್ಥಾನಕ್ಕಾಗಿ ಹೈಕಮಾಂಡ್ ಮಟ್ಟದಲ್ಲಿ ಒತ್ತಡ ಹೇರುತ್ತಿದ್ದಾರೂ ಅವರ ಮೇಲಿರುವ ಹಲವು ಇಡಿ ಪ್ರಕರಣಗಳು ಮತ್ತು ಜಿಲ್ಲೆಯಲ್ಲಿ ಒಮ್ಮೆ ಮಾತ್ರ ಆಯ್ಕೆಯಾಗಿರುವ ಶಾಸಕರಾಗಿರುವುದರಿಂದ ಸಚಿವ ಸ್ಥಾನ ಸಿಗುವುದು ಅನುಮಾನವಾಗಿದೆ.
ಆದಾಗ್ಯೂ, ಶಾಸಕ ರಘುಮೂರ್ತಿ ಅವರು, "ನಾನು ಸತತ ಮೂರು ಬಾರಿ ಗೆದ್ದಿದ್ದೇನೆ, ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ನನ್ನದೇ ಆದ ಕನಸುಗಳಿವೆ. ಪಕ್ಷ ನನ್ನ ಹಿರಿತನ ಮತ್ತು ನಿಷ್ಠೆಯನ್ನು ಪರಿಗಣಿಸಿ ಸಚಿವ ಸ್ಥಾನ ನೀಡುವ ವಿಶ್ವಾಸವಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಜವಾಬ್ದಾರಿಗಳು:
ಪ್ರಸ್ತುತ ಟಿ. ರಘುಮೂರ್ತಿ ಅವರು ಶಾಸಕರಾಗಿ ಕಾರ್ಯನಿರ್ವಹಿಸುವುದರ ಜೊತೆಗೆ, ಕರ್ನಾಟಕ ಸರ್ಕಾರದ ಸಾರ್ವಜನಿಕ ಉದ್ಯಮಗಳ ಶಾಸನಸಭೆ ಸಮಿತಿಯ ಅಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಮಂಗಳೂರಿನ ಯುಜಿಡಿ ಮೂಲಸೌಕರ್ಯ ಹಾಗೂ ಉಡುಪಿಯ ಕುಡಿಯುವ ನೀರಿನ ಯೋಜನೆಗಳ ಪರಿಶೀಲನೆ ನಡೆಸಿ ಸರ್ಕಾರದ ಗಮನ ಸೆಳೆದಿದ್ದಾರೆ. ಈ ಹಿಂದೆ ಇವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಲಾಗಿತ್ತು.
ಒಟ್ಟಾರೆಯಾಗಿ ಹೇಳುವುದಾದರೆ, ಟಿ. ರಘುಮೂರ್ತಿ ಅವರಿಗೆ ಕ್ಲೀನ್ ಇಮೇಜ್, ಎಲ್ಲಾ ಜಾತಿ, ಜನಾಂಗಗಳನ್ನು ಪ್ರೀತಿಸುತ್ತಿರುವ ರಘುಮೂರ್ತಿ ಅವರ ಸತತ ಮೂರು ಗೆಲುವುಗಳು ಮತ್ತು ಸಾಮಾಜಿಕ ಸಮೀಕರಣದ ಆಧಾರದ ಮೇಲೆ ಸಚಿವ ಸ್ಥಾನಕ್ಕೆ ಅತ್ಯಂತ ಅರ್ಹ ಆಕಾಂಕ್ಷಿಯಾಗಿದ್ದಾರೆ. ಇದನ್ನು ಕಾಂಗ್ರೆಸ್ ಪಕ್ಷ ಮತ್ತು ಭವಿಷ್ಯದ ಸಿಎಂ ಡಿ.ಕೆ ಶಿವಕುಮಾರ್ ಗಂಭೀರವಾಗಿ ಪರಿಗಣಿಸಬೇಕಾಗಿದೆ.
ಮುಂಬರುವ ದಿನಗಳಲ್ಲಿ ಹೈಕಮಾಂಡ್ ಹಾಗೂ ರಾಜ್ಯದ ನಾಯಕತ್ವ ಚಿತ್ರದುರ್ಗ ಜಿಲ್ಲೆಯ ಕೋಟಾದಡಿ ಇವರಿಗೆ ಮಂತ್ರಿಗಿರಿ ನೀಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
“ಚಿತ್ರದುರ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಹೆಚ್. ಏಕಾಂತಯ್ಯ, ಬಿ.ಎಲ್. ಗೌಡ ಹಾಗೂ ಡಿ. ಸುಧಾಕರ್ ಅವರು ಈ ಹುದ್ದೆ ಅಲಂಕರಿಸಿದ ಬಳಿಕ ರಾಜ್ಯ ಸಚಿವರಾಗಿ ಜವಾಬ್ದಾರಿ ನಿರ್ವಹಿಸಿದ್ದರು. ಇದೀಗ ಅದೇ ಹಾದಿಯಲ್ಲಿ ರಘುಮೂರ್ತಿ ಅವರು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗಾದಿಗೇರಿದ್ದು, ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ಗಿಟ್ಟಿಸುವ ಸಾಲಿಗೆ ಸೇರ್ಪಡೆಯಾಗಿದ್ದಾರೆ”.



