ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ವಿದ್ಯಮಾನವೊಂದರಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಯನ್ನು ರಾಜ್ಯಪಾಲರು ಅಧಿಕೃತವಾಗಿ ಅಂಗೀಕರಿಸಿದ್ದಾರೆ. ಇದರ ಬೆನ್ನಲ್ಲೇ ಹಾಲಿ ಸಚಿವ ಸಂಪುಟವನ್ನು ಸಹ ವಿಸರ್ಜನೆ ಮಾಡಲಾಗಿದ್ದು, ಕರ್ನಾಟಕದಲ್ಲಿ ಹೊಸ ಸರ್ಕಾರದ ಪರ್ವ ಆರಂಭವಾಗಿದೆ.
ಮುಂದಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿರುವ ನಿಯೋಜಿತ ಸಿಎಂ ಡಿ.ಕೆ. ಶಿವಕುಮಾರ್ ಅವರು ನೂತನ ಸಚಿವ ಸಂಪುಟ ರಚನೆಯ ಕಸರತ್ತಿಗೆ ಕೈ ಹಾಕಿದ್ದಾರೆ. ಈ ಸಂಬಂಧ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರೊಂದಿಗೆ ಸುದೀರ್ಘ ಹಾಗೂ ಮಹತ್ವದ ಚರ್ಚೆ ನಡೆಸಿದ್ದಾರೆ.
ಹೈಕಮಾಂಡ್ ಮಟ್ಟದಲ್ಲಿ ತೀವ್ರ ಚರ್ಚೆ:
ದೆಹಲಿಯಲ್ಲಿ ಬೀಡು ಬಿಟ್ಟಿರುವ ಡಿ.ಕೆ. ಶಿವಕುಮಾರ್ ಅವರು ಎಐಸಿಸಿ ವರಿಷ್ಠರೊಂದಿಗೆ ಪ್ರಮುಖ ಎರಡು ವಿಷಯಗಳ ಕುರಿತು ಗಹನವಾದ ಸಮಾಲೋಚನೆ ನಡೆಸುತ್ತಿದ್ದಾರೆ.
ಮುಂದಿನ ಕೆಪಿಸಿಸಿ ಅಧ್ಯಕ್ಷ ಯಾರು?: ಡಿ.ಕೆ. ಶಿವಕುಮಾರ್ ಅವರು ಸಿಎಂ ಗಾದಿ ಏರುತ್ತಿರುವುದರಿಂದ ತೆರವಾಗಲಿರುವ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಯಾರಿಗೆ ಕಟ್ಟಬೇಕು? ಎನ್ನುವ ಚರ್ಚೆ ಕೂಡಾ ಆರಂಭವಾಗಿದೆ.
ಸಚಿವ ಸಂಪುಟ ಸೇರ್ಪಡೆ: ಪ್ರಾದೇಶಿಕ ಮತ್ತು ಸಾಮಾಜಿಕ ಸಮತೋಲನ ಕಾಯ್ದುಕೊಂಡು ಯಾರಿಗೆಲ್ಲಾ ಸಚಿವ ಸ್ಥಾನ ನೀಡಬೇಕು? ಎನ್ನುವುದು ಕೂಡಾ ಚರ್ಚೆಗೆ ಬಂದಿದೆ ಎನ್ನಲಾಗಿದೆ.
ದೆಹಲಿಗೆ ಹರಿದುಬಂದ ಶಾಸಕರ ದಂಡು: 40ಕ್ಕೂ ಹೆಚ್ಚು ಆಕಾಂಕ್ಷಿಗಳು!
ಮತ್ತೊಂದೆಡೆ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಶಾಸಕರ ಲಾಬಿ ತಾರಕಕ್ಕೇರಿದೆ. ಸದ್ಯದ ಮಾಹಿತಿ ಪ್ರಕಾರ ಸುಮಾರು 40ಕ್ಕೂ ಹೆಚ್ಚು ಶಾಸಕರು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದು, ಈಗಾಗಲೇ ದೆಹಲಿಯತ್ತ ಮುಖ ಮಾಡಿದ್ದಾರೆ. ಹೈಕಮಾಂಡ್‌ನ ಪ್ರಭಾವಿ ನಾಯಕರನ್ನು ಭೇಟಿಯಾಗಿ ತಮಗೆ ಸಚಿವ ಸ್ಥಾನ ನೀಡುವಂತೆ ತೀವ್ರ ಒತ್ತಡ ಹೇರುತ್ತಿದ್ದಾರೆ.
ಸಚಿವ ಸ್ಥಾನದ ರೇಸ್‌ನಲ್ಲಿ ಮುಂಚೂಣಿಯಲ್ಲಿರುವವರು:
ಹೊಸ ಸಂಪುಟದಲ್ಲಿ ಸ್ಥಾನ ಪಡೆಯಲು ಹಳಬರು ಮತ್ತು ಹೊಸಬರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಒಟ್ಟಾರೆಯಾಗಿ ರಾಜಧಾನಿ ಬೆಂಗಳೂರಿನಿಂದ ದೆಹಲಿಯವರೆಗೆ ರಾಜಕೀಯ ಚಟುವಟಿಕೆಗಳು ಗರಿ ಬಿಚ್ಚಿದ್ದು, ಮುಂದಿನ ಒಂದೆರಡು ದಿನಗಳಲ್ಲಿ ಹೊಸ ಸಚಿವರ ಪಟ್ಟಿ ಅಂತಿಮಗೊಳ್ಳುವ ಸಾಧ್ಯತೆಯಿದೆ.



