i
60 ವರ್ಷಗಳ ನಂತರ 100 ದಿನಗಳಿಂದ ತುಂಬಿ ಹರಿಯುತ್ತಿರುವ ಜಯಮಂಗಲಿ ನದಿ…
ಚಂದ್ರವಳ್ಳಿ ನ್ಯೂಸ್, ತುಮಕೂರು:
ಬಯಲು ಸೀಮೆಯ ತುಮಕೂರು ಜಿಲ್ಲೆಯಾದ್ಯಂತ ಪ್ರಸಕ್ತ ಸಾಲಿನಲ್ಲಿ ಉತ್ತಮ ಮಳೆ ಆಗಿದ್ದರಿಂದಾಗಿ ಬಯಲುಸೀಮೆ ವ್ಯಾಪ್ತಿಯ ಮಧುಗಿರಿ ಮತ್ತು ಕೊರಟಗೆರೆ ತಾಲೂಕು ವ್ಯಾಪ್ತಿಯಲ್ಲಿ ಹರಿಯುವ ಜಯಮಂಗಲಿ ನದಿ 60 ವರ್ಷಗಳ ನಂತರ ಕಳೆದ 100 ದಿನಗಳಿಂದ ತುಂಬಿ ಹರಿಯುತ್ತಿರುವುದು ದಾಖಲೆಯಾಗಿದೆ. ಜಯಮಂಗಲಿ ನದಿ 60 ವರ್ಷಗಳ ಹಿಂದೆ ವರ್ಷಕ್ಕೆ ಕನಿಷ್ಠ ಒಂದರಿಂದ ಎರಡು ತಿಂಗಳ ಕಾಲ ಹರಿಯುತ್ತಿತ್ತು. ಸುಮಾರು 40 ವರ್ಷಗಳ ಹಿಂದೆ ಜಯಮಂಗಲಿ ನದಿಗೆ ಅಡ್ಡಲಾಗಿ ಗೊರವನಹಳ್ಳಿ ಬಳಿ ಟೀತ ಡ್ಯಾಮ್ ನಿರ್ಮಿಸಿತ್ತು. ಬಳಿಕ ಮಳೆ ಪ್ರಮಾಣ ಕ್ಷೀಣಿಸಿದಂತೆ ನದಿ ಹರಿದು ದಶಕಗಳೇ ಕಳೆದುಹೋಗಿತ್ತು. ಅಲ್ಲದೆ ನದಿ ನೀರು ಖಾಲಿಯಾಗಿ ಮರಳು ಸಾಗಣೆ ಆರಂಭವಾಗಿತ್ತು. ಬಳಿಕ ಸರ್ಕಾರ ಈ ಬಗ್ಗೆ ಕಠಿಣ ಕ್ರಮ ಕೈಗೊಂಡಿತ್ತು.
ತುಮಕೂರು ಜಿಲ್ಲೆಯ ದೇವರಾಯನ ದುರ್ಗದ ಗುಡ್ಡ-ಬೆಟ್ಟಗಳ ತಪ್ಪಲಿನಲ್ಲಿ ಹುಟ್ಟಿ ಆಂಧ್ರಪ್ರದೇಶದ ಬಂಗಾಳಕೊಲ್ಲಿ ಸೇರುವ ಜಯ ಮಂಗಲಿ ನದಿ ತುಂಬಿ ತುಮಕೂರು ಜಿಲ್ಲೆಯ ಕೊರಟಗೆರೆ, ಮಧುಗಿರಿ ಹಾಗೂ ಆಂಧ್ರದ ಮಡಕಶಿರಾ ತಾಲೂಕಿನಲ್ಲಿ ಹರಿಯುತ್ತದೆ. ಕಳೆದ ವರ್ಷ ನವೆಂಬರ್ ನಲ್ಲಿ ಕೇವಲ 20 ದಿನ ಹರಿದಿತ್ತು. ಆದರೆ ಪ್ರಸಕ್ತ ಸಾಲಿನ 2022 ಆಗಸ್ಟ್ 1ರಿಂದ ಆರಂಭವಾಗಿ ನೂರಕ್ಕೂ ಹೆಚ್ಚು ದಿನ ಹರಿದಿರುವುದು ಗಮನಾರ್ಹ ಸಂಗತಿಯಾಗಿದೆ.