i
ಮದುವೆ ರಜೆ ಮುಗಿಸಿ ಕೆಲಸಕ್ಕೆ ಬಂದಿದ್ದ ನವವಧು ಗ್ರಾಮ ಲೆಕ್ಕಾಧಿಕಾರಿ ನಿಗೂಢ ಸಾವು…
ಚಂದ್ರವಳ್ಳಿ ನ್ಯೂಸ್, ಮೈಸೂರು:
ನವವಧು ಮಹಿಳಾ ಗ್ರಾಮ ಲೆಕ್ಕಾಧಿಕಾರಿ ಮದುವೆ ರಜೆ ಬಳಿಕ ಕೆಲಸಕ್ಕೆ ಬಂದ ಕೂಡಲೇ ನಿಗೂಢ ಸಾವು ಕಂಡಿದ್ದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಗ್ರಾಮ ಸೇವಕಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಮೈಸೂರು ಜಿಲ್ಲೆಯ ಹಣಸೂರು ತಾಲೂಕಿನ ಬಿಳಿಕೆರೆ ಗ್ರಾಮದಲ್ಲಿ ನಡೆದಿದೆ.
ಕೃಷ್ಣಾಬಾಯಿ ತುಕಾರಾಂ ಪಡ್ಕೆ(25) ಮೃತ ಗ್ರಾಮ ಲೆಕ್ಕಾಧಿಕಾರಿ. ಮೃತ ಕೃಷ್ಣಾಬಾಯಿ ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಎಸ್ಗಳ್ಳಿ ಗ್ರಾಮದವರು. ಒಂದು ತಿಂಗಳ ಹಿಂದಷ್ಟೇ ಕೃಷ್ಣಾಬಾಯಿ ಅವರ ಮದುವೆ ನಡೆದಿತ್ತು. ಮದುವೆ ರಜೆಯಲ್ಲಿದ್ದ ಕೃಷ್ಣಾಬಾಯಿ ನಾಲ್ಕು ದಿನಗಳ ಹಿಂದಷ್ಟೇ ಸೇವೆಗೆ ಹಿಂದಿರುಗಿದ್ದರು. ಇದೀಗ ಕೃಷ್ಣಾಬಾಯಿ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಕಾರಣ ನಿಗೂಢವಾಗಿದೆ.
ಕೃಷ್ಣಾಬಾಯಿ ಅವರ ಪತಿ ಸುಬಾಸ್ ಬೋಸ್ಲೆ ಹನೂರಿನ ಅರಣ್ಯ ಇಲಾಖೆಯ ಫಾರೆಸ್ಟ್ ಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕೃಷ್ಣಾಬಾಯಿ ಸಹೋದ್ಯೋಗಿ ಗ್ರಾಮ ಲೆಕ್ಕಾಧಿಕಾರಿ ಚೈತ್ರ ಮತ್ತು ಅವರ ತಾಯಿಯೊಂದಿಗೆ ಬಿಳಿಕೆರೆಯ ಎಸ್ಬಿಐ ಹಿಂಬಾಗದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು ಎನ್ನಲಾಗಿದೆ, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದ್ದು ಕೃಷ್ಣಾಬಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.