i
5 ಗ್ಯಾರಂಟಿ ಜಾರಿ ಇಕ್ಕಟ್ಟಿನಲ್ಲಿ ಸರ್ಕಾರ, ದಿನಗಳ ಮುಂದೂಡಿಕೆ!?…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮನೆ ಮನೆಗೆ 5 ಗ್ಯಾರೆಂಟಿ ಕಾರ್ಡ್ ಗಳನ್ನು ಹಂಚಿಕೆ ಮಾಡಿ ಸರ್ಕಾರ ಅಧಿಕಾರಕ್ಕೆ ಬಂದರೆ ಮೊದಲ ದಿನವೇ ಘೋಷಣೆ ಮಾಡುವುದಾಗಿ ಹೇಳಿದ್ದ ಕಾಂಗ್ರೆಸ್ ಈಗ ದಿನಗಳನ್ನು ಮುಂದೂಡುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಸಲ್ಲಿ ಬುಧವಾರ ಕರೆಯಲಾಗಿದ್ದ ಮಹತ್ವದ ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಜಾರಿ ಹೊಣೆಯನ್ನು ಸಿದ್ದರಾಮಯ್ಯ ಅವರಿಗೆ ವಹಿಸಿದ್ದಲ್ಲದೆ ಪರಮಾಧಿಕಾರವನ್ನು ನೀಡಲಾಗಿದೆ ಎನ್ನಲಾಗಿದೆ.
ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಮತದಾರರಿಗೆ 5 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವುದಾಗಿ ಪ್ರತಿಯೊಂದು ಮನೆಗೂ ಗ್ಯಾರಂಟಿ ಕಾರ್ಡ್ ಹಂಚಿಕೆ ಮಾಡಿತ್ತು.
ಕಾಂಗ್ರೆಸ್ ಪಕ್ಷ ನೀಡಿದ್ದ 5 ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ ಯೋಜನೆ – ಪ್ರತಿತಿಂಗಳು ಮಹಿಳೆಯರಿಗೆ 2 ಸಾವಿರ ರೂ., ಗೃಹಜ್ಯೋತಿ- ಪ್ರತಿಯೊಂದು ಮನೆಗೂ 200 ಯುನಿಟ್ ವಿದ್ಯುತ್ ಉಚಿತ, ಅನ್ನಭಾಗ್ಯ ಯೋಜನೆ ಅಡಿ ಬಿಪಿಎಲ್ ಕುಟುಂಬದ ಪ್ರತಿಯೊಬ್ಬ ವ್ಯಕ್ತಿಗೆ ತಲಾ 10 ಕೆಜಿ ಅಕ್ಕಿ ಉಚಿತ, ಕರ್ನಾಟಕ ಸಾರಿಗೆ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಯುವನಿಧಿ ಯೋಜನೆ ಅಡಿ ನಿರುದ್ಯೋಗಿ ಪದವಿಧರರಿಗೆ 3,000 ರೂ. ಡಿಪ್ಲೋಮಾ ಮಾಡಿದ ನಿರುದ್ಯೋಗಿಗಳಿಗೆ 1,500 ರೂ.ಗಳನ್ನು ಪ್ರತಿ ತಿಂಗಳು ನಿರುದ್ಯೋಗ ಭತ್ಯೆ ನೀಡಲಾಗುತ್ತದೆ ಎಂದು ಕಾಂಗ್ರೆಸ್ ಪಕ್ಷ 5 ಗ್ಯಾರಂಟಿಗಳನ್ನು ಘೋಷಣೆ ಮಾಡಿ ಮತ ಪಡೆದು ಅಧಿಕಾರಕ್ಕೆ ಬಂದಿದ್ದು ಹಳೆಯ ಸುದ್ದಿ.
ಆದರೆ ಈಗ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೇ 5 ಗ್ಯಾರಂಟಿಗಳನ್ನು ಯಾವಾಗ ಜಾರಿ ಮಾಡಲಿದ್ದಾರೆ ಎಂದು ಸಾರ್ವಜನಿಕರು ರಾಜ್ಯದ ಹಲವು ಭಾಗಗಳಲ್ಲಿ ಗಲಾಟೆ ಮಾಡಿದ್ದು ಆಗಿದೆ. ಇದರ ಜೊತೆಯಲ್ಲಿ ವಿರೋಧ ಪಕ್ಷಗಳು ನಿತ್ಯ ಆಡಳಿತ ರೂಢ ಕಾಂಗ್ರೆಸ್ ಮೇಲೆ ಗ್ಯಾರಂಟಿ ಜಾರಿ ಮಾಡದ ಸರ್ಕಾರದ ವಿರುದ್ಧ ಮುಗಿ ಬೀಳುತ್ತಿವೆ.
ಈ ದಿನ ನಡೆದ ಮಹತ್ವದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವರಾದ ಡಾ.ಜಿ.ಪರಮೇಶ್ವರ, ಕೆ.ಜೆ.ಜಾರ್ಜ್, ಎಂ.ಬಿ.ಪಾಟೀಲ್, ಕೆ.ಎಚ್. ಮುನಿಯಪ್ಪ, ರಾಮಲಿಂಗಾರೆಡ್ಡಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಸೇರಿ ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು.
ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸಂಪುಟ ಸಭೆಯ ದಿನವನ್ನು ನಿಗದಿ ಮಾಡಲಾಗಿದೆ ಎನ್ನಲಾಗಿದೆ.
ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಂದ ಹೆಚ್ಚುವರಿ ಆರ್ಥಿಕ ಹೊರೆ ಬಗ್ಗೆ ಸಭೆಗೆ ವಿವರಣೆ ನೀಡಿದರು ಎನ್ನಲಾಗಿದ್ದು, ಗ್ಯಾರಂಟಿಗಳಿಗೆ ಷರತ್ತು ಹಾಕುವ ಬಗ್ಗೆ ಸಚಿವರಿಂದ ಅಭಿಪ್ರಾಯ ವಿನಿಮಯ ಮಾಡಲಾಗಿದೆ ಎನ್ನಲಾಗಿದೆ.
ಆದರೆ ಎಂದಿನಂತೆ ಗುರುವಾರ ನಡೆಯಬೇಕಿದ್ದ ಸಂಪುಟ ಸಭೆಯನ್ನು ಒಂದು ದಿನದ ಮಟ್ಟಿಗೆ ಮುಂದೂಡಿ ಶುಕ್ರವಾರ ಸಂಪುಟ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಸಂಪುಟ ಸಭೆಯ ನಂತರ ಅಧಿಕೃತವಾಗಿ ಗ್ಯಾರಂಟಿಗಳ ಘೋಷಣೆ ಮಾಡಲಾಗುತ್ತದೆ ಎನ್ನುವ ವರದಿಯಾಗಿದೆ.
ಸಚಿವ ಸಂಪುಟ ಸಭೆಯನ್ನು ಶುಕ್ರವಾರ ಬೆಳಗ್ಗೆ 11 ಗಂಟೆಗೆ ಮುಂದೂಡಲಾಗಿದ್ದರಿಂದ 5 ಗ್ಯಾರಂಟಿ ಯೋಜನೆ ಘೋಷಣೆಯ ನಿರೀಕ್ಷೆಯಲ್ಲಿದ್ದ ಜನತೆಗೆ ಮತ್ತೆ ನಿರಾಸೆಯಾಗಿದೆ.
ಸಿಎಂ ಸಿದ್ದರಾಮಯ್ಯ ಮಾತನಾಡಿ, ಕಾಂಗ್ರೆಸ್ ನೀಡಿದ್ದ ಐದು ಗ್ಯಾರಂಟಿಗಳನ್ನೂ ಜಾರಿ ಮಾಡುವುದು ನೂರಷ್ಟು ಗ್ಯಾರಂಟಿ. ಸಂಪುಟ ಸಭೆಯಲ್ಲಿ ಎಲ್ಲದರ ಬಗ್ಗೆ ತೀರ್ಮಾನ ಮಾಡುತ್ತೇವೆ. ಆರ್ಥಿಕ ಹೊರೆ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ಹೇಳಿದ್ದಾರೆ.