
ಕೋಟೆನಾಡಿನಲ್ಲಿ ಭೀಕರ ರಸ್ತೆ ಅಪಘಾತ, ಮೂರು ಮಂದಿ ಸ್ಥಳದಲ್ಲೇ ಸಾವು…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಭೀಕರ ರಸ್ತೆ ಅಪಘಾತದಲ್ಲಿ ಮೂರು ಮಂದಿ ಸ್ಥಳದಲ್ಲೇ ಮೃತಪಟ್ಟು ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿತ್ರದುರ್ಗ ಸಮೀಪದ ಮಲ್ಲಾಪುರ ಬಳಿ ಜರುಗಿದೆ.
ಮೃತ ದೇಹ ಸಾಗಿಸುತ್ತಿದ್ದ ಆಂಬ್ಯುಲೆನ್ಸ್ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕನಕಮಣಿ (72), ಆಕಾಶ್(17) ಮತ್ತು 45 ವರ್ಷದ ಆಂಬ್ಯುಲೆನ್ಸ್ ಚಾಲಕ ಸಾವನ್ನಪ್ಪಿದ್ದಾನೆ.
ಗುರುವಾಗ ಬೆಳಗ್ಗೆ ನಿಂತಿದ್ದ ಲಾರಿಗೆ ಆಂಬ್ಯುಲೆನ್ಸ್ ಹೋಗಿ ಡಿಕ್ಕಿ ಹೊಡೆದಿದೆ. ಪರಿಣಾಮ ಆಂಬ್ಯುಲೆನ್ಸ್ ನಲ್ಲಿದ್ದ ಮೂವರು ದುರ್ಮರಣ ಹೊಂದಿದ್ದಾರೆ. ಆಂಬ್ಯುಲೆನ್ಸ್ ಅಹಮದಾಬಾದ್ ನಿಂದ ತಮಿಳುನಾಡಿಗೆ ಶವ ಸಾಗಿಸುವ ವೇಳೆ ಮಾರ್ಗ ಮಧ್ಯೆ ಅಪಘಾತ ಸಂಭವಿಸಿದೆ.
ಆಂಬ್ಯುಲೆನ್ಸ್ ಅಪಘಾತದಲ್ಲಿ ಜ್ಞಾನ ಶೇಖರ್ , ಮೌಳಿ ರಾಜನ್ ಎಂಬುವವರಿಗೆ ಗಾಯಗಳಾಗಿದ್ದು, ಚಿತ್ರದುರ್ಗ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಚಿತ್ರದುರ್ಗದ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.