
ಸರ್ಕಾರಿ ಬಸ್ ಗಳಲ್ಲಿ ಸೀಟು ಮೀಸಲು ಇಡಿ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಶಕ್ತಿ ಯೋಜನೆ ಜಾರಿಗೆ ಬಂದ ನಂತರ ನಿಜಕ್ಕೂ ಹಿರಿಯ ನಾಗರಿಕರು ಸಾರಿಗೆ ಬಸ್ಸುಗಳಲ್ಲಿ ನೆಮ್ಮದಿಯ ಪ್ರಯಾಣ ಮಾಡಲು ಆಗುತ್ತಿಲ್ಲ. ಇದು ಕೇವಲ ನನ್ನ ವೈಯಕ್ತಿಕ ಅಭಿಪ್ರಾಯ ಅಲ್ಲ. ಸಾವಿರಾರು ಸಂಖ್ಯೆಯ ಹಿರಿಯ ನಾಗರಿಕರ ಸಮಸ್ಯೆ. ಶಾಲಾ ವಿದ್ಯಾರ್ಥಿಗಳು, ಆಸ್ಪತ್ರೆ, ಕಚೇರಿಗೆ ತೆರಳುವವರು ಹಣ ಸಂದಾಯ ಮಾಡಿದರು ಸಹ ಸೀಟು ಸಿಗದೆ ನೂರಾರು ಕಿಲೋ ಮೀಟರ್ ನಿಂತು ಪ್ರಯಾಣಿಸಬೇಕಾಗಿದೆ. ಹಾಗಾಗಿ ಸರ್ಕಾರ ಶಕ್ತಿ ಯೋಜನೆ ಫಲಾನುಭವಿಗಳು ಹಾಗೂ ಹಣ ಪಾವತಿಸಿ ಪ್ರಯಾಣಿಸುವ ಯಾವುದೇ ವ್ಯಕ್ತಿಗಳೇ ಇರಲಿ ಬಸ್ ನ ತಲಾ ಅರ್ಧದಷ್ಟು ಸೀಟು ಮೀಸಲು ಇಡಬೇಕು. ನಮ್ಮ ಮನೆಗಳಲ್ಲೂ ಹೆಣ್ಣು ಮಕ್ಕಳು ಇದ್ದಾರೆ ಎಂಬ ಎಚ್ಚರದಿಂದಲೇ ಈ ಮಾತು ಆಡುತ್ತಿರುವುದು. ಸ್ತ್ರೀಯರು ಸ್ವತಂತ್ರವಾಗಿ ಸಂಚರಿಸಬೇಕು ಸರಿ. ಆದರೆ ಬಸ್ ಗಳಲ್ಲಿ ಹಿರಿಯ ನಾಗರಿಕರು ನಿಂತು ಪ್ರಯಾಣಿಸುವಾಗ ಯುವಕರು ಆರಾಮವಾಗಿ ಕುಳಿತು ಪ್ರಯಾಣಿಸುವುದು ಯಾವ ಸಂಸ್ಕೃತಿ. ಸಮಾಜಕ್ಕೆ ಸರ್ಕಾರ ನೀಡುತ್ತಿರುವ ಸಂದೇಶ ಏನು? ಅದರಲ್ಲೂ ರಜಾ ದಿನಗಳ ಹಿಂದೆ ಮುಂದೆ ಪ್ರಯಾಣಿಸುವುದು ನರಕ ಸದೃಶ ಹಿಂಸೆ.
ಇಂಥ ವಾದ ಮಂಡಿಸಿದರೆ, ಅಂತಹವರನ್ನು ಸ್ತ್ರೀಯರು, ಬಡವರ ವಿರೋಧಿಗಳು ಎಂದು ಬಣ್ಣ ಕಟ್ಟಿ ಆರೋಪಿಸುವವರು ಇದ್ದಾರೆ. ಸಾರಿಗೆ ಬಸ್ಸುಗಳಲ್ಲಿ ನೆಮ್ಮದಿಯ ಪ್ರಯಾಣ ಅಸಾಧ್ಯ ಆಗಿರುವುದರಿಂದ ಈಗ ಸಾಕಷ್ಟು ಸಂಖ್ಯೆಯ ಜನರು ಹಣ ಪಾವತಿಸಿ ಖಾಸಗಿ ಬಸ್ ಗಳಲ್ಲಿ ಸಂಚರಿಸುತ್ತಿದ್ದಾರೆ ಎಂಬುದು ವಾಸ್ತವ ಸಂಗತಿ.
ಕೆಲವೊಮ್ಮೆ, ಆಯಾ ಸಂದರ್ಭಕ್ಕೆ ಅನುಗುಣವಾಗಿ ಹೊಸ ಯೋಜನೆ ರೂಪಿಸುವ ಸಂದರ್ಭದಲ್ಲಿ ಇಂತಹ ಅನನುಕೂಲ ಸಂಭವಿಸುವುದು ಸರಿಯಷ್ಟೆ. ಆದರೆ ಅಂತ ಯೋಜನೆ ಜಾರಿಯಿಂದ ಆಗುವ ಸಣ್ಣ ಪುಟ್ಟ ಅಡ್ಡ ಪರಿಣಾಮವನ್ನು ಸರಿಪಡಿಸುವುದು ಸರ್ಕಾರದ ಹೊಣೆ.
ನಾನು ಹಿರಿಯ ನಾಗರಿಕನಾದ ಪ್ರಯುಕ್ತ ನನಗೆ ಬಸ್ ಗಳಲ್ಲಿ ನಿಂತು ಪ್ರಯಾಣಿಸಲು ಆಗುತ್ತಿಲ್ಲ. ಕಂಡಕ್ಟರ್ ಗೆ ಕೇಳಿದರೆ ಅವರು ‘ಹೇಗೋ ನೀವೆ ಅಡ್ಜಸ್ಟ್ ಮಾಡಿಕೊಂಡು ಹೋಗಿ‘ ಎಂದು ಸುಮ್ಮನಾಗುತ್ತಾರೆ. ಈ ಸಮಸ್ಯೆ ನನ್ನ ಒಬ್ಬನದು ಅಲ್ಲ. ರಾಜ್ಯದ ಎಲ್ಲಾ ಹಿರಿಯ ನಾಗರಿಕರು, ಪುರುಷರ ಸಮಸ್ಯೆ.
ಹಾಗಾಗಿ ಸರ್ಕಾರ ಸರ್ಕಾರಿ ಬಸ್ ಗಳಲ್ಲಿ ಹಿರಿಯ ನಾಗರಿಕರು ಮತ್ತು ಪುರುಷರಿಗೆ ಸೀಟು ಮೀಸಲು ಇಡದಿದ್ದರೆ ಹಿರಿಯ ನಾಗರಿಕನಾದ ನಾನು ಸಂಸತ್ ಚುನಾವಣೆ ಸೇರಿದಂತೆ ಮುಂದಿನ ಯಾವುದೇ ಚುನಾವಣೆಯಲ್ಲಿ ಮತದಾನ ಮಾಡುವುದಿಲ್ಲ. ಇದು ಏಕ ವ್ಯಕ್ತಿ ಪ್ರತಿಭಟನೆ ಆದರೂ ಸರಿಯೆ.
–ಎಂ.ಜಿ. ರಂಗಸ್ವಾಮಿ, ಹಿರಿಯೂರು.