i
ಮಾಜಿ ಸಂಸದ ಸಿ.ಪಿ. ಮೂಡಲಗಿರಿಯಪ್ಪ ಇನ್ನಿಲ್ಲ, ಭಾನುವಾರ ಅಂತ್ಯಕ್ರಿಯೆ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಸಿ.ಪಿ. ಮೂಡಲಗಿರಿಯಪ್ಪ(84) ಶನಿವಾರ ಬೆಂಗಳೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ತೀವ್ರ ಉಸಿರಾಟದ ಸಮಸ್ಯೆಯಿಂದಾಗಿ ಕಳೆದ ಮೂರು ದಿನಗಳಿಂದೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಶನಿವಾರ ಕೊನೆಯುಸಿರೆಳೆದಿದ್ದಾರೆ.
ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಚಿರತಹಳ್ಳಿ ಗ್ರಾಮದ ನಿವಾಸಿಯಾಗಿದ್ದಾರೆ. ಅವರ ಅಂತ್ಯ ಕ್ರಿಯೆ ಭಾನುವಾರ ಬೆಳಿಗ್ಗೆ ಚಿರತಹಳ್ಳಿಯ ಗಣೇಶಗುಡಿ ಎಸ್ಟೇಟ್ ನಲ್ಲಿ ನಡೆಯಲಿದೆ.
ಮೃತ ಮೂಡಲಗಿರಿಯಪ್ಪನವರು ಪತ್ನಿ ಲಕ್ಷ್ಮಿದೇವಿ, ಪುತ್ರ ಹಾಗೂ ಮಾಜಿ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ, ಪುತ್ರಿ ಡಾ.ಕವಿತಾ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ರಾಜಕೀಯ ಹಿನ್ನೆಲೆ-
ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದ ಸಿ.ಪಿ.ಮೂಡಲಗಿರಿಯಪ್ಪ ಇವರು 1985ರಲ್ಲಿ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಮೊದಲ ಪ್ರಯತ್ನದಲ್ಲೇ ವಿಧಾನಸಭೆಗೆ ಆಯ್ಕೆಯಾಗುವ ಮೂಲಕ ಗಮನ ಸೆಳೆದಿದ್ದರು.
ರಾಷ್ಟ್ರ ರಾಜಕಾರಣದತ್ತ ಮುಖ ಮಾಡಿದ ಮೂಡಲಗಿರಿಯಪ್ಪ ಇವರು ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಬರೊಬ್ಬರಿ ಮೂರು ಬಾರಿ, ಅಂದರೆ 1989, 1991 ಮತ್ತು 1998 ರಲ್ಲಿ ವಿಜಯಶಾಲಿ ಆಗಿದ್ದರು. ಕಾಂಗ್ರೆಸ್ ಪಕ್ಷದಿಂದ ವಿಮುಖರಾದ ಇವರು ಬಿಜೆಪಿಗೆ ಸೇರ್ಪಡೆಯಾಗಿ ಲೋಕಸಭೆಗೆ ಸ್ಪರ್ಧಿಸಿ ಸೋಲುಂಡಿದ್ದರು. ನಂತರ ಶಿರಾ ವಿಧಾನಸಭೆಗೆ 2020ರಲ್ಲಿ ನಡೆದ ಉಪಚುನಾವಣೆಯಲ್ಲಿ ಮೂಡಲಗಿರಿಯಪ್ಪ ಪುತ್ರ ಡಾ.ಸಿ.ಎಂ.ರಾಜೇಶ್ಗೌಡರು ಬಿಜೆಪಿಯಿಂದಲೇ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದರು.
ಸಂತಾಪ-ರಾಜಕೀಯದಲ್ಲಿ ಅಜಾತಶತ್ರು ಆಗಿದ್ದ ಮೂಡಲಗಿರಿಯಪ್ಪ ಇವರು ಸರಳ, ಸಜ್ಜನಿಕೆಯ ಸ್ನೇಹ ಜೀವಿಯಾಗಿದ್ದರು. ಇವರ ನಿಧನದಿಂದಾಗಿ ಸಜ್ಜನಿಕೆಯ ಮೇರು ವ್ಯಕ್ತಿಯೊಬ್ಬರನ್ನು ರಾಜಕೀಯ ಕ್ಷೇತ್ರ ಕಳೆದುಕೊಂಡಂತಾಗಿದೆ ಎಂದು ಸ್ನೇಹಿತರು ಕಂಬನಿ ಮಿಡಿದಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಪ್ರಾರ್ಥಿಸಿದ್ದಾರೆ.