ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ದಕ್ಷಿಣ ತಾಲೂಕಿನ ಮಾದಾಪಟ್ಟಣ ಬಳಿ ಗುರುವಾರ ನಸುಕಿನ ಜಾವ ಕಲ್ಲು ಕ್ವಾರಿಯೊಂದರಲ್ಲಿ ಭೀಕರ ದುರಂತ ಸಂಭವಿಸಿದೆ. ಅಕ್ರಮ ಗಣಿಗಾರಿಕೆ ವೇಳೆ ಬಂಡೆ ಕುಸಿದು ಬಿದ್ದ ಪರಿಣಾಮ ಬಿಹಾರ ಮೂಲದ ಏಳು ಮಂದಿ ಕಾರ್ಮಿಕರು ಸ್ಥಳದಲ್ಲೇ ಜೀವಂತವಾಗಿ ಸಮಾಧಿಯಾಗಿದ್ದಾರೆ.
ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ‘ಕಾವೇರಿ ಕ್ರಷರ್’ನಲ್ಲಿ ಈ ಘಟನೆ ನಡೆದಿದ್ದು, ಬಂಡೆಯ ಅವಶೇಷಗಳ ಅಡಿಯಲ್ಲಿ ಇನ್ನು ಹಲವು ಕಾರ್ಮಿಕರು ಸಿಲುಕಿರುವ ಆತಂಕ ವ್ಯಕ್ತವಾಗಿದೆ.
ದುರಂತ ಸಂಭವಿಸಿದ್ದು ಹೇಗೆ?:
ಅಕ್ರಮ ಗಣಿಗಾರಿಕೆ ಆರೋಪ: ಸ್ಥಳೀಯ ಮೂಲಗಳ ಪ್ರಕಾರ, ಹುಲವೇನಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಯಾವುದೇ ಅಧಿಕೃತ ಪರವಾನಗಿ ಇಲ್ಲದೆ ಕದ್ದುಮುಚ್ಚಿ ಅಕ್ರಮವಾಗಿ ಕ್ವಾರಿ ನಡೆಸಲಾಗುತ್ತಿತ್ತು.
ಜಿಲೆಟಿನ್ ಸ್ಫೋಟದ ತೀವ್ರತೆ: ಗುರುವಾರ ಮುಂಜಾನೆ 7:30ರ ಸುಮಾರಿಗೆ ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ, ದೊಡ್ಡ ಬಂಡೆಗಳನ್ನು ಪುಡಿ ಮಾಡಲು ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಅತಿಯಾದ ತೀವ್ರತೆಯ ಜಿಲೆಟಿನ್ ಸ್ಫೋಟಕಗಳನ್ನು ಬಳಸಲಾಗಿದೆ.
ಯಮನಾಗಿ ಬಂದ ಬಂಡೆ: ಸ್ಫೋಟದ ಭೀಕರ ಸೌಂಡ್‌ನೊಂದಿಗೆ ಇಡೀ ಪ್ರದೇಶವೇ ಸಿಡಿದಿದ್ದು, ಮೇಲಿಂದ ಬೃಹತ್ ಬಂಡೆಯೊಂದು ಇಟಾಚಿ (ಹಿಟಾಚಿ) ಯಂತ್ರದೊಂದಿಗೆ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆಯೇ ಕುಸಿದು ಬಿದ್ದಿದೆ.
ಸ್ಥಳದಲ್ಲಿ ಮುಂದುವರಿದ ರಕ್ಷಣಾ ಕಾರ್ಯ:
ಘಟನಾ ಸ್ಥಳಕ್ಕೆ ತಾವರೆಕೆರೆ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ತಕ್ಷಣವೇ ಧಾವಿಸಿದ್ದು, ಬಂಡೆಗಳ ಅಡಿಯಲ್ಲಿ ಸಿಲುಕಿರುವ ಇತರ ಕಾರ್ಮಿಕರನ್ನು ಹೊರತೆಗೆಯಲು ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ. ಜೆಸಿಬಿ ಹಾಗೂ ಆಧುನಿಕ ಉಪಕರಣಗಳ ಮೂಲಕ ಕಲ್ಲುಗಳನ್ನು ತೆರವುಗೊಳಿಸಲಾಗುತ್ತಿದ್ದು, ಮೃತರ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.



