ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು:
ಭದ್ರಾ ನದಿಯ ಹಿನ್ನೀರಿನಲ್ಲಿ ಈಜಲು ಹೋಗಿ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಕೊನೆಗೂ ಪತ್ತೆಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲೂಕಿನ ಹಂದೂರು ವ್ಯಾಪ್ತಿಯ ಸಿದ್ದರಾಮಯ್ಯ ಸೇತುವೆ ಸಮೀಪದಲ್ಲಿ ನಡೆದಿದೆ.
ಮೃತ ಪಟ್ಟ ವ್ಯಕ್ತಿ ನರಸಿಂಹರಾಜಪುರ ತಾಲೂಕಿನ ಸಿಗುವಾನಿ ನಿವಾಸಿ ನಿತಿನ್ (38), ಶನಿವಾರ ಮಧ್ಯಾಹ್ನ ಈಜಲು ತೆರಳಿದ್ದಾಗ ಘಟನೆ ಸಂಭವಿಸಿದೆ. ಮೂವರು ಸ್ನೇಹಿತರು ಸೇರಿ ಸೇತುವೆ ಸಮೀಪದ ಈಜಲು ತೆರಳಿದ್ದಾಗ ಈ ಪೈಕಿ ಇಬ್ಬರು ಸುರಕ್ಷಿತವಾಗಿ ದಡಕ್ಕೆ ಮರಳಿದ್ದಾರೆ. ನಿತಿನ್ ನೀರಿನ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದರು.
ಈ ಕುರಿತು ಅಗ್ನಿಶಾಮಕ ದಳ, ಪೊಲೀಸ್‌ಇಲಾಖೆ ಹಾಗೂ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಶನಿವಾರ ತೀವ್ರ ಶೋಧ ಕಾರ್ಯಚರಣೆ ಆರಂಭಿಸಿದ್ದರು. ಭಾನುವಾರ ಬೆಳಿಗ್ಗೆಯಿಂದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಮೃತದೇಹ ಪತ್ತೆ ಮಾಡಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.


