ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜನಪದವು ಆಯಾ ಸಮಾಜದ ಬದುಕಿನ ಮೌಲ್ಯಗಳು, ಕಷ್ಟ-ಸುಖಗಳು ಹಾಗೂ ಇತಿಹಾಸವನ್ನು ಬಿಂಬಿಸುವ ಪ್ರಮುಖ ಕೈಗನ್ನಡಿಯಾಗಿದೆ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ (ಕರ್ನಾಟಕ) ಜಾನಪದ ಪ್ರಾಕಾರದ ರಾಜ್ಯ ಪ್ರಮುಖರಾದ ಶ್ರೀಮತಿ ಶ್ರೀರಂಜಿನಿ ದತ್ತಾತ್ರಿ ತಿಳಿಸಿದರು.
ಚಿತ್ರದುರ್ಗದ ವಿಶ್ವ ಹಿಂದೂ ಪರಿಷತ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಅಖಿಲ ಭಾರತೀಯ ಸಾಹಿತ್ಯ ಪರಿಷತ್, ಕರ್ನಾಟಕ – ಜಾನಪದ ಪ್ರಕಾರದ ಚಿತ್ರದುರ್ಗ ಜಿಲ್ಲಾ ಘಟಕದ ಉದ್ಘಾಟನೆ ಮತ್ತು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಸ್ವಾಗತ ಹಾಗೂ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, "ಯಾವುದೇ ಔಪಚಾರಿಕ ಶಾಲಾ ಶಿಕ್ಷಣವಿಲ್ಲದೆ, ಬಾಯಿಂದ ಬಾಯಿಗೆ ಹಾಗೂ ಆಚರಣೆಗಳ ಮೂಲಕ ತಲೆಮಾರಿನಿಂದ ತಲೆಮಾರಿಗೆ ಹರಿದುಬಂದಿರುವ ಜೀವಂತ ಸಂಸ್ಕೃತಿಯೇ ಜಾನಪದ. ಭಾರತೀಯ ಜನಪದ ಸಂಸ್ಕೃತಿಗೂ ಮತ್ತು ಹನುಮಂತನಿಗೂ ಅತ್ಯಂತ ಆಳವಾದ ಸಂಬಂಧವಿದೆ. ಹನುಮಂತನು ಗ್ರಾಮೀಣ ಜನರ ದೈನಂದಿನ ಬದುಕು, ಆಚರಣೆ, ಬಯಲಾಟ, ಯಕ್ಷಗಾನ ಮತ್ತು ತೊಗಲುಗೊಂಬೆಯಾಟದಂತಹ ಕಲೆಗಳಲ್ಲಿ ಹಾಸುಹೊಕ್ಕಾಗಿದ್ದಾನೆ" ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಕಾರ ಭಾರತಿಯ ರಾಜ್ಯ ಕಾರ್ಯದರ್ಶಿ ರಾಜೀವ ಲೋಚನ ಮಾತನಾಡಿ, "ಜನಪದ ಸಾಹಿತ್ಯವು ಅಜ್ಞಾತ ಮೂಲದ್ದಾಗಿದ್ದು, ಇದು ಸಮಷ್ಟಿಯ (ಸಮಾಜದ) ಅಭಿವ್ಯಕ್ತಿಯಾಗಿದೆ. ಕಾಲಕ್ಕೆ ತಕ್ಕಂತೆ ಬದಲಾವಣೆಗಳನ್ನು ಸ್ವೀಕರಿಸುತ್ತಾ ಕಂಠಸ್ಥ ರೂಪದಲ್ಲಿ ಉಳಿದುಬಂದಿರುವ ಈ ಜಾನಪದ ಪ್ರಕಾರವನ್ನು ನಾವೆಲ್ಲರೂ ಒಟ್ಟಾಗಿ ಮುನ್ನಡೆಸಬೇಕಿದೆ" ಎಂದು ಶುಭ ಹಾರೈಸಿದರು.
ನೂತನ ಪದಾಧಿಕಾರಿಗಳ ಆಯ್ಕೆ ಮತ್ತು ಜವಾಬ್ದಾರಿ:
ಚಿತ್ರದುರ್ಗ ಜಿಲ್ಲಾಧ್ಯಕ್ಷೆಯಾಗಿ ಜವಾಬ್ದಾರಿ ಸ್ವೀಕರಿಸಿ ಮಾತನಾಡಿದ ಆಕಾಶವಾಣಿ ಕಲಾವಿದೆ ಶ್ರೀಮತಿ ಅಂಬಿಕಾ, "ಎಲ್ಲರ ಸಹಕಾರ ಮತ್ತು ಪ್ರೀತಿಯಿಂದ ಈ ಜಾನಪದ ತೇರನ್ನು ಮುನ್ನಡೆಸುತ್ತೇನೆ. ಜನಪದ ಕಲಾವಿದರು ಮತ್ತು ಸಾರ್ವಜನಿಕರನ್ನು ಒಗ್ಗೂಡಿಸಿ ಸಂಸ್ಥೆಯನ್ನು ಬೆಳೆಸಲು ಶ್ರಮಿಸುತ್ತೇನೆ" ಎಂದರು.
ಚಿತ್ರದುರ್ಗ ಜಿಲ್ಲಾ ನೂತನ ಪದಾಧಿಕಾರಿಗಳ ವಿವರ:
ಜಿಲ್ಲಾಧ್ಯಕ್ಷರು: ಶ್ರೀಮತಿ ಅಂಬಿಕಾ, ಉಪಾಧ್ಯಕ್ಷರು: ಕೆಂಚವೀರಪ್ಪ, ಜಿಲ್ಲಾ ಕಾರ್ಯದರ್ಶಿ: ಶ್ರೀಮತಿ ಲಕ್ಷ್ಮಿ ರಾಘವೇಂದ್ರ, ಖಜಾಂಚಿ: ಶ್ರೀಮತಿ ಲಕ್ಷ್ಮಿ ಶ್ರೀನಿವಾಸ್, ಸದಸ್ಯರು: ನಾಗರಾಜ್ ಶಾಸ್ತ್ರಿ, ಶ್ರೀಮತಿ ಅಂಬುಜಾಕ್ಷಿ, ಶ್ರೀಮತಿ ಲಕ್ಷ್ಮಿ ವಾಸುದೇವ್, ಶ್ರೀಮತಿ ಚಿತ್ರ, ಶ್ರೀಮತಿ ಸುಮನ, ಮತ್ತು ಯೋಗೀಶ್.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ್ ಭಟ್ ನರೂರ್, ರಾಜ್ಯ ಅನವರ್ತಿ ಪ್ರಮುಖ ರಘು ಶೆಟ್ರು ಹಾಗೂ ಸಾಮಾಜಿಕ ಜಾಲತಾಣದ ರಾಜ್ಯ ಪ್ರಮುಖ ಗಣೇಶ ಅಡಿಗ ಅವರುಗಳು ನೂತನ ಜಿಲ್ಲಾ ತಂಡಕ್ಕೆ ಶುಭ ಹಾರೈಸಿದರು.
ಅಂತಿಮವಾಗಿ ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನವಾಯಿತು.




