ಚಂದ್ರವಳ್ಳಿ ನ್ಯೂಸ್, ಚೆನ್ನೈ:
ನ್ಯಾಯಾಂಗ ಹಾಗೂ ಭಾರತದ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪ ಎದುರಿಸುತ್ತಿರುವ ಕಾಕ್ರೋಚ್ ಜನತಾ ಪಾರ್ಟಿ ನಾಯಕ ಸೌರವ್ ದಾಸ್ ಅಲಿಯಾಸ್ ಯೋಗೇಶ್ ಶರ್ಮಾ ಮತ್ತು ಕೇಂದ್ರ ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಚೆನ್ನೈ ನಿವಾಸಿ ಆರ್. ಗಣೇಶ್ ಕುಮಾರ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸುಶ್ರುತ್ ಅರವಿಂದ್ ಧರ್ಮಾಧಿಕಾರಿ ಹಾಗೂ ನ್ಯಾಯಮೂರ್ತಿ ಜಿ. ಅರುಳ್ ಮುರುಗನ್ ಅವರನ್ನೊಳಗೊಂಡ ಪೀಠ, ಸೌರವ್ ದಾಸ್ ಹಾಗೂ ಕೇಂದ್ರದ ಗೃಹ ಮತ್ತು ವಿದೇಶಾಂಗ ಸಚಿವಾಲಯಗಳು ಆರು ವಾರಗಳಲ್ಲಿ ಉತ್ತರಿಸುವಂತೆ ನಿರ್ದೇಶಿಸಿದೆ.
ಅರ್ಜಿದಾರರ ಮನವಿಗಳೇನು?: ಸಮಗ್ರ ತನಿಖೆ: ಸೌರವ್ ದಾಸ್ ಮತ್ತು ಪುದುಚೇರಿಯಲ್ಲಿರುವ ಅವರ ಕುಟುಂಬದ (ತಾಯಿ ಸೀಮ್ ಛೆಟ್ರಿ ಹಾಗೂ ತಂದೆ ಬಿಜಯ್ ಶರ್ಮಾ) ಹಿನ್ನೆಲೆ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕು.
ಖಾತೆ ಬ್ಲಾಕ್: ಎಕ್ಸ್ (ಟ್ವಿಟರ್) ಮತ್ತು ಇನ್ಸ್ಟಾಗ್ರಾಂನಲ್ಲಿರುವ ಅವರ ಸಾಮಾಜಿಕ ಜಾಲತಾಣ ಖಾತೆಗಳನ್ನು ತಕ್ಷಣವೇ ನಿರ್ಬಂಧಿಸಬೇಕು.
ದಾಖಲೆ ರದ್ದು: ತನಿಖೆಯಲ್ಲಿ ತಪ್ಪಿತಸ್ಥರೆಂದು ಕಂಡುಬಂದರೆ ಅವರ ಪಾಸ್ಪೋರ್ಟ್ ಮತ್ತು ಆಧಾರ್ ಕಾರ್ಡ್ ರದ್ದುಗೊಳಿಸಲು ಕ್ರಮ ಕೈಗೊಳ್ಳಬೇಕು.
ಈ ಹಿಂದೆ ಅಕ್ಟೋಬರ್ 7ರಂದು ನೀಡಿದ್ದ ಮನವಿಗೆ ಅಧಿಕಾರಿಗಳಿಂದ ಯಾವುದೇ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಅರ್ಜಿದಾರರು ನ್ಯಾಯಾಲಯದ ಬಾಗಿಲು ತಟ್ಟಿದ್ದರು.




