ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಜಿಲ್ಲೆಯ ವಿವಿಧ ತಾಲ್ಲೂಕುಗಳ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಒಟ್ಟು 93 ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಚಿತ್ರದುರ್ಗ 15 ಹುದ್ದೆ, ಭರಮಸಾಗರ 14 ಹುದ್ದೆ, ಚಳ್ಳಕೆರೆ 14 ಹುದ್ದೆ, ಹಿರಿಯೂರು 13 ಹುದ್ದೆ, ಹೊಳಲ್ಕೆರೆ 13 ಹುದ್ದೆ, ಹೊಸದುರ್ಗ 14 ಹುದ್ದೆ ಮತ್ತು ಮೊಳಕಾಲ್ಮುರುನಲ್ಲಿ10 ಹುದ್ದೆಗಳು ಖಾಲಿಯಿವೆ. ಕಾರ್ಯಕರ್ತೆಯರಿಗೆ ಮಾಸಿಕ ರೂ. 5,500 ಹಾಗೂ ಸಹಾಯಕಿಯರಿಗೆ ಮಾಸಿಕ ರೂ. 3,000 ಗೌರವಧನ ನೀಡಲಾಗುವುದು.
ಅಭ್ಯರ್ಥಿಗಳು 18 ರಿಂದ 35 ವರ್ಷದೊಳಗಿನ ಮಹಿಳೆಯರು ಅರ್ಜಿ ಸಲ್ಲಿಸಬಹುದು.ಕಾರ್ಯಕರ್ತೆ ಹುದ್ದೆ ದ್ವಿತೀಯ ಪಿಯುಸಿ ತೇರ್ಗಡೆಯಾಗಿರಬೇಕು. ಒಂದು ವೇಳೆ ಪಿಯುಸಿ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದರೆ 10ನೇ ತರಗತಿ ಪಾಸಾದವರನ್ನು ಪರಿಗಣಿಸಲಾಗುವುದು. ಸಹಾಯಕಿ ಹುದ್ದೆಗೆ ಕನಿಷ್ಠ 10ನೇ ತರಗತಿ ಪಾಸಾಗಿರಬೇಕು. ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ 7ನೇ ತರಗತಿ ಪಾಸಾದವರನ್ನು ಪರಿಗಣಿಸಲಾಗುತ್ತದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಜೂನ್ 08ರ ಒಳಗೆ ಸಲ್ಲಿಸಬಹುದು. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಆಯಾ ವ್ಯಾಪ್ತಿಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


