ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯು ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಪ್ರಾಂಶುಪಾಲರ (ಸ್ನಾತಕ ಶಿಕ್ಷಣ) ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಆಯ್ಕೆಯಾದ ಅಭ್ಯರ್ಥಿಗಳ ಅಂತಿಮ ನೇಮಕಾತಿ ಆದೇಶವನ್ನು ಹೊರಡಿಸಿದೆ.
ಕರ್ನಾಟಕ ಶಿಕ್ಷಣ ಇಲಾಖಾ ಸೇವೆಗಳ (ಕಾಲೇಜು ಶಿಕ್ಷಣ ಇಲಾಖೆ) (ಪ್ರಾಂಶುಪಾಲರ ಹುದ್ದೆಗಳ ನೇಮಕಾತಿ) (ಸ್ನಾತಕ ಶಿಕ್ಷಣ) (ವಿಶೇಷ) ನಿಯಮಗಳು 2020 ಮತ್ತು ತಿದ್ದುಪಡಿ ನಿಯಮಗಳು 2022ರನ್ವಯ, ಯುಜಿಸಿ ವೇತನ ಶ್ರೇಣಿ ರೂ. 1,31,400 - 2,17,100 ರಲ್ಲಿ ಈ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ.
ರಾಜ್ಯವ್ಯಾಪಿ ಮಿಕ್ಕುಳಿದ ಮೂಲ ವೃಂದ ಹಾಗೂ ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದದಡಿ ಒಟ್ಟು ಅರ್ಹ ಅಭ್ಯರ್ಥಿಗಳಿಗೆ ಈ ನೇಮಕಾತಿ ಅನ್ವಯಿಸಲಿದೆ.
ಸ್ಥಳನಿಯುಕ್ತಿ: ಆಯುಕ್ತರು, ಕಾಲೇಜು ಶಿಕ್ಷಣ ಇಲಾಖೆ ಇವರು ಜೇಷ್ಠತೆಯ ಆಧಾರದ ಮೇಲೆ ಒಂದು ವಾರದೊಳಗೆ ಕೌನ್ಸಿಲಿಂಗ್ ನಡೆಸಿ ಸ್ಥಳನಿಯುಕ್ತಿ ಆದೇಶ ನೀಡಲಿದ್ದಾರೆ.
ಪದಾವಧಿ: ಪ್ರಾಂಶುಪಾಲರ ನೇಮಕಾತಿಯು ಆರಂಭಿಕವಾಗಿ 5 ವರ್ಷಗಳ ಅವಧಿಗೆ ಮಾತ್ರ ಇರಲಿದ್ದು, ಕಾರ್ಯನಿರ್ವಹಣಾ ಮೌಲ್ಯಮಾಪನವನ್ನು ಆಧರಿಸಿ ಮತ್ತೊಂದು 5 ವರ್ಷಗಳಿಗೆ ವಿಸ್ತರಿಸಬಹುದಾಗಿದೆ.
ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವುದು: ಸ್ಥಳನಿಯುಕ್ತಿ ಆದೇಶ ಹೊರಡಿಸಿದ ದಿನಾಂಕದಿಂದ 15 ದಿನಗಳ ಒಳಗಾಗಿ ಸಂಬಂಧಪಟ್ಟ ಕಾಲೇಜಿನಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.




