ಚಂದ್ರವಳ್ಳಿ ನ್ಯೂಸ್, ವಿಜಯನಗರ
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣದ ಸಮೀಪದ ಮೋರಿಗೇರಿ ಕ್ರಾಸ್ ಬಳಿ ಕೆಕೆಆರ್‌ಟಿಸಿ ಬಸ್‌ನ ಅಕ್ಸಲ್ ಬ್ಲೇಡ್ ತುಂಡಾದ ಪರಿಣಾಮ ಸಂಭವಿಸಬಹುದಾಗಿದ್ದ ಭಾರಿ ಅನಾಹುತ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.
ಹಡಗಲಿಯಿಂದ ಬೆಳಿಗ್ಗೆ 6.45ಕ್ಕೆ ಹಗರಿಬೊಮ್ಮನಹಳ್ಳಿ ಕಡೆಗೆ ಪ್ರಯಾಣಿಸುತ್ತಿದ್ದ ಕೆಕೆಆರ್‌ಟಿಸಿ ಬಸ್‌ನಲ್ಲಿ ಸುಮಾರು 45 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಮಾರ್ಗಮಧ್ಯೆ ಮೋರಿಗೇರಿ ಕ್ರಾಸ್ ಬಳಿ ಬಸ್‌ನ ಅಕ್ಸಲ್ ಏಕಾಏಕಿ ತುಂಡಾಗಿದ್ದು, ಬಸ್ ನಿಯಂತ್ರಣ ಕಳೆದುಕೊಂಡು ರಸ್ತೆಯಿಂದಾಚೆ ತಗ್ಗು ಪ್ರದೇಶದತ್ತ ಚಲಿಸಿದೆ.
ಈ ವೇಳೆ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡ ಚಾಲಕ ಅಪಾರ ಧೈರ್ಯ ಹಾಗೂ ಸಮಯಪ್ರಜ್ಞೆ ಪ್ರದರ್ಶಿಸಿ ಬಸ್ ಅನ್ನು ಪಕ್ಕದ ಮರದ ಕಡೆಗೆ ವಾಲಿಸಿದ್ದಾರೆ. ಇದರಿಂದ ಬಸ್ ಪಲ್ಟಿಯಾಗುವುದು ಅಥವಾ ಮತ್ತಷ್ಟು ದೊಡ್ಡ ದುರಂತ ಸಂಭವಿಸುವುದು ತಪ್ಪಿದೆ.
ಘಟನೆಯಲ್ಲಿ ಕೆಲ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ತಕ್ಷಣ ಹಗರಿಬೊಮ್ಮನಹಳ್ಳಿ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಎಲ್ಲಾ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನೆಯ ಬಳಿಕ ಸ್ಥಳಕ್ಕೆ ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಸ್‌ನ ತಾಂತ್ರಿಕ ದೋಷದ ಕುರಿತು ತನಿಖೆ ಆರಂಭಿಸಲಾಗಿದೆ.
ಚಾಲಕನ ಸಮಯಪ್ರಜ್ಞೆ ಹಾಗೂ ಜಾಣ್ಮೆಯ ಚಾಲನೆಗೆ ಪ್ರಯಾಣಿಕರು ಮತ್ತು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.



