ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭಾರತದ ರಾಜಕೀಯ ಇತಿಹಾಸದಲ್ಲೇ ಅತ್ಯಂತ ದೀರ್ಘಾವಧಿ ಕಾಲ ಪ್ರಜಾಸತ್ತಾತ್ಮಕವಾಗಿ ದೇಶವನ್ನು ಮುನ್ನಡೆಸಿ, ಯಶಸ್ವಿ ಆಡಳಿತವನ್ನು ಮುಂದುವರಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನತಾದಳ (ಸೆಕ್ಯುಲರ್) ಪಕ್ಷವು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದೆ.
ಕಳೆದ 4,399 ದಿನಗಳ ನಿರಂತರ ಆಡಳಿತದಲ್ಲಿ ಪ್ರಧಾನಿ ಮೋದಿ ಅವರು ದೇಶದಾದ್ಯಂತ ತಂದಿರುವ ಮೂಲಸೌಕರ್ಯ ಕ್ರಾಂತಿ ಹಾಗೂ ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ತಂದುಕೊಟ್ಟಿರುವ ಗೌರವ ಅನನ್ಯವಾದುದು ಎಂದು ಜೆಡಿಎಸ್ ಶ್ಲಾಘಿಸಿದೆ.
ನವ ಭಾರತದ ಆರ್ಥಿಕ ಯಶೋಗಾಥೆ-
ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಆಡಳಿತವು ಭಾರತವನ್ನು ಜಗತ್ತಿನ ಮುಂಚೂಣಿ ಆರ್ಥಿಕತೆಯ ರಾಷ್ಟ್ರವಾಗಿ ಪರಿವರ್ತಿಸಿದೆ. ದೇಶದ ಆರ್ಥಿಕತೆಗೆ ಅಭೂತಪೂರ್ವ ಶಕ್ತಿ ತುಂಬಿರುವ ಪ್ರಮುಖ ಯೋಜನೆಗಳ ಸಾಧನೆಯನ್ನು ಜೆಡಿಎಸ್ ಮುಕ್ತಕಂಠದಿಂದ ಶ್ಲಾಘಿಸಿದೆ.
ಮಹೋನ್ನತ ಯೋಜನೆಗಳು: 'ಮೇಕ್ ಇನ್ ಇಂಡಿಯಾ', 'ಡಿಜಿಟಲ್ ಇಂಡಿಯಾ' ಮತ್ತು 'ಆತ್ಮನಿರ್ಭರ ಭಾರತ'ದಂತಹ ಯೋಜನೆಗಳು ದೇಶದ ಆರ್ಥಿಕ ಮುನ್ನಡೆಗೆ ಹೊಸ ದಿಕ್ಸೂಚಿ ನೀಡಿವೆ.
ವಿಮಾನ ನಿಲ್ದಾಣಗಳ ಕ್ರಾಂತಿ: ದೇಶದಲ್ಲಿದ್ದ ವಿಮಾನ ನಿಲ್ದಾಣಗಳ ಸಂಖ್ಯೆಯನ್ನು 74ರಿಂದ 164ಕ್ಕೆ ಹೆಚ್ಚಿಸುವ ಮೂಲಕ ವಾಯುಯಾನ ವಲಯದಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸಲಾಗಿದೆ.
ಹೆದ್ದಾರಿ ಅಭಿವೃದ್ಧಿ: ಲಕ್ಷಾಂತರ ಕಿಲೋಮೀಟರ್ ಅತ್ಯಾಧುನಿಕ ಹೆದ್ದಾರಿಗಳ ನಿರ್ಮಾಣದ ಮೂಲಕ ದೇಶದ ಮೂಲಸೌಕರ್ಯಕ್ಕೆ ಕಾಯಕಲ್ಪ ನೀಡಲಾಗಿದೆ.
ಡಿಜಿಟಲ್ ಸಬಲೀಕರಣ: ಕೋಟ್ಯಂತರ ಜನಸಾಮಾನ್ಯರಿಗೆ ಡಿಜಿಟಲ್ ತಂತ್ರಜ್ಞಾನದ ಸೌಲಭ್ಯಗಳನ್ನು ತಲುಪಿಸುವ ಮೂಲಕ ನವ ಭಾರತದ ಯಶೋಗಾಥೆಯನ್ನು ಬರೆಯಲಾಗಿದ್ದು, ಇದು ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುವಂತೆ ಮಾಡಿದೆ.
'ವಿಕಸಿತ ಭಾರತ 2047'ಕ್ಕೆ ಜೆಡಿಎಸ್ ಬದ್ಧತೆ-
ಕಳೆದ 4,399 ದಿನಗಳಲ್ಲಿ ರಾಷ್ಟ್ರ ಕಂಡಿರುವ ಈ ಸಾರ್ವತ್ರಿಕ ಅಭಿವೃದ್ಧಿ ಪಥದಲ್ಲಿ ಜೆಡಿಎಸ್ ಪಕ್ಷವು ಸಂಪೂರ್ಣವಾಗಿ ಕೈಜೋಡಿಸಲಿದೆ. ನಮ್ಮ ನಾಯಕರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರ ಸಮರ್ಥ ನೇತೃತ್ವದಲ್ಲಿ, ಪ್ರಧಾನಿ ಮೋದಿಯವರ ಮಹತ್ವಾಕಾಂಕ್ಷೆಯ ಕನಸಾದ 'ವಿಕಸಿತ ಭಾರತ 2047' ಅನ್ನು ಸಾಕಾರಗೊಳಿಸಲು ಜೆಡಿಎಸ್ ಪಕ್ಷವು ಹೆಗಲಿಗೆ ಹೆಗಲು ಕೊಟ್ಟು ಸಾಗಲು ಸಂಪೂರ್ಣ ಬದ್ಧವಾಗಿದೆ ಎಂದು ಪಕ್ಷ ಪ್ರಕಟಣೆಯಲ್ಲಿ ತಿಳಿಸಿದೆ.



