ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆದ ಸಿಸಿಬಿ ಹಠಾತ್ ದಾಳಿ ಸ್ವಯಂಪ್ರೇರಿತವಲ್ಲ; ಅದು ತಮ್ಮದೇ ನೇರ ಆದೇಶದ ಮೇರೆಗೆ ನಡೆದ ಕಾರ್ಯಾಚರಣೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಬುಧವಾರ ಸ್ಪಷ್ಟಪಡಿಸಿದ್ದಾರೆ.
ಅತ್ಯಾಚಾರ ಪ್ರಕರಣದ ಅಪರಾಧಿ, ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸೇರಿದಂತೆ ಕೈದಿಗಳ ಬಳಿ ಸ್ಮಾರ್ಟ್‌ಫೋನ್ ಹಾಗೂ ಪೆನ್ ಡ್ರೈವ್‌ಗಳು ಪತ್ತೆಯಾದ ಬೆನ್ನಲ್ಲೇ ಗೃಹ ಸಚಿವರು ಈ ಮಹತ್ವದ ಹೇಳಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚಿಸಿ ಅನುಮತಿ ಪಡೆದ ಬಳಿಕ ಸುಮಾರು 100 ಮಂದಿ ಸಿಸಿಬಿ ಸಿಬ್ಬಂದಿಯನ್ನು ಈ ಜೈಲು ಶೋಧ ಕಾರ್ಯಚರಣೆಗೆ ನಿಯೋಜಿಸಲಾಗಿತ್ತು ಎಂದು ಖರ್ಗೆ ತಿಳಿಸಿದರು.
ಜೈಲು ಅಧಿಕಾರಿಗಳ ಅಮಾನತು – ಕಠಿಣ ಎಚ್ಚರಿಕೆ:
ಎರಡು-ಮೂರು ವಾರಗಳ ಹಿಂದೆ ತಾವೇ ಸ್ವತಃ ಜೈಲಿಗೆ ಭೇಟಿ ನೀಡಿದ್ದಾಗ ಹಲವು ಆಡಳಿತಾತ್ಮಕ ಲೋಪದೋಷಗಳು ಕಂಡುಬಂದಿದ್ದವು. ಕೈದಿಗಳಿಗೆ ಅಕ್ರಮವಾಗಿ ಸಹಕರಿಸುತ್ತಿದ್ದ ಶಂಕಿತ ಅಧಿಕಾರಿಗಳನ್ನು ಈಗಾಗಲೇ ಅಮಾನತುಗೊಳಿಸಲು ಆದೇಶಿಸಲಾಗಿದೆ. "ನಮ್ಮ ಇಲಾಖೆಯಲ್ಲಿ ಹಳೆಯ ಶೈಲಿಯಲ್ಲಿ ಅಕ್ರಮ ಎಸಗುವ ಅಧಿಕಾರಿಗಳಿದ್ದಾರೆ, ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಅಪರಾಧ ಸಾಬೀತಾದರೆ ಅಂತಹ ಅಧಿಕಾರಿಗಳನ್ನು ಸೇವೆಯಿಂದಲೇ ವಜಾಗೊಳಿಸಲಾಗುವುದು" ಎಂದು ಗೃಹ ಸಚಿವರು ಗುಡುಗಿದ್ದಾರೆ.
ರಾಜ್ಯಾದ್ಯಂತ ವಿಸ್ತರಿಸಲಿದೆ ಜೈಲುಗಳ ಶೋಧ:ಈ ದಾಳಿ ಕೇವಲ ಪರಪ್ಪನ ಅಗ್ರಹಾರಕ್ಕೆ ಸೀಮಿತವಾಗಿರುವುದಿಲ್ಲ. ಕಲಬುರಗಿ, ಬೆಳಗಾವಿ, ಬೆಂಗಳೂರು ಸೇರಿದಂತೆ ರಾಜ್ಯದ ಯಾವುದೇ ಕಾರಾಗೃಹದಲ್ಲಾದರೂ ಯಾವುದೇ ಕ್ಷಣದಲ್ಲಿ ಇಂತಹ ಸರ್ಪ್ರೈಸ್ ರೈಡ್ ನಡೆಯಬಹುದು. ಜೈಲುಗಳಲ್ಲಿ ಯಾವುದೇ ಕಾರಣಕ್ಕೂ ಕೈದಿಗಳಿಗೆ 'ವಿಐಪಿ ಸೌಲಭ್ಯ' ನೀಡಲು ಬಿಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಪ್ರಜ್ವಲ್ ರೇವಣ್ಣ ಬಳಿ ಸಿಕ್ಕ ಮೊಬೈಲ್ ವಿಚಾರಣೆ:
ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್‌ನಲ್ಲಿ ಮೊಬೈಲ್ ಹಾಗೂ ಪೆನ್ ಡ್ರೈವ್ ಸಿಕ್ಕಿರುವ ವಿಷಯಕ್ಕೆ ಪ್ರತಿಕ್ರಿಯಿಸಿದ ಅವರು, "ನಿಷೇಧಿತ ವಸ್ತುಗಳು ಜೈಲಿನೊಳಗೆ ಹೇಗೆ ಬಂದವು, ಯಾರ ನೆರವಿನಿಂದ ತರಲಾಯಿತು ಎಂಬುದರ ತನಿಖೆ ನಡೆಯುತ್ತಿದೆ. ತನಿಖೆಯ ಗೌಪ್ಯತೆ ಕಾಯ್ದುಕೊಳ್ಳಲು ತಕ್ಷಣವೇ ಎಲ್ಲ ವಿವರ ಬಹಿರಂಗಪಡಿಸಲಾಗುವುದಿಲ್ಲ. ಸೂಕ್ತ ಸಮಯದಲ್ಲಿ ಮಾಹಿತಿ ನೀಡಲಾಗುವುದು" ಎಂದರು. ಅಲ್ಲದೆ, ಜೈಲುಗಳ ಡಿಜಿಟಲ್ ಮೂಲಸೌಕರ್ಯ ಹಾಗೂ ಮೊಬೈಲ್ ಫೋನ್ ಜಾಮರ್‌ಗಳ ತಾಂತ್ರಿಕ ಪರಿಶೀಲನೆಗೂ ಆದೇಶಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.



