ಚಂದ್ರವಳ್ಳಿ ನ್ಯೂಸ್, ಮಂಡ್ಯ:
ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ಆದೇಶವನ್ನು ಖಂಡಿಸಿ ಮಂಡ್ಯ ಜಿಲ್ಲೆಯಾದ್ಯಂತ ಪ್ರತಿಭಟನೆಯ ಕಿಚ್ಚು ಮತ್ತಷ್ಟು ತೀವ್ರಗೊಂಡಿದೆ. ರೈತ ಸಂಘಟನೆಗಳು, ಕರವೇ ಹಾಗೂ ಕನ್ನಡಪರ ಒಕ್ಕೂಟಗಳು ರಸ್ತೆಗಿಳಿದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿವೆ.
ಬೆಂಗಳೂರು-ಮೈಸೂರು ಹೆದ್ದಾರಿ ತಡೆ: ಮಂಡ್ಯದ ಹಳೆ ಹೆದ್ದಾರಿ ಹಾಗೂ ಮದ್ದೂರಿನ ಕೊಪ್ಪ ವೃತ್ತದಲ್ಲಿ ರೈತರು ಮತ್ತು ಕನ್ನಡಪರ ಹೋರಾಟಗಾರರು ರಸ್ತೆ ತಡೆ ನಡೆಸಿ ಸಿಡಬ್ಲ್ಯೂಆರ್‌ಸಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಅಪ್ಪಿಕೋ ಚಳವಳಿ ಹಾಗೂ ದೃಷ್ಟಿ ತೆಗೆಯುವ ಪೂಜೆ: ಕಾವೇರಿ ಭವನದ ಬಳಿ ಬಿಜೆಪಿ ನಾಯಕ ಶಿವಕುಮಾರ ಆರಾಧ್ಯ ನೇತೃತ್ವದಲ್ಲಿ ಕಾವೇರಿ ಪ್ರತಿಮೆಗೆ 'ಅಪ್ಪಿಕೋ ಚಳವಳಿ' ನಡೆಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಸರ್ಕಾರಕ್ಕೆ ತಮಿಳುನಾಡಿಗೆ ನೀರು ಬಿಡದಂತೆ ಧೈರ್ಯ ಬರಲಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಭಾವಚಿತ್ರಕ್ಕೆ ನಿಂಬೆಹಣ್ಣಿನಿಂದ ದೃಷ್ಟಿ ತೆಗೆದು ಹಾರೈಸಿದರು.
'ಪಟೆ ಪಟೆ ಚಡ್ಡಿ' ತಮಟೆ ಚಳವಳಿ: ಮಂಡ್ಯದಲ್ಲಿ ಹೋರಾಟಗಾರರು 'ಪಟೆ ಪಟೆ ಚಡ್ಡಿ' ಧರಿಸಿ, ತಮಟೆ ಬಾರಿಸುವ ಮೂಲಕ ವಿಭಿನ್ನವಾಗಿ ಸರ್ಕಾರದ ಗಮನ ಸೆಳೆದರು.
ಚಿತ್ರರಂಗ ಹಾಗೂ ನಟರ ವಿರುದ್ಧ ಸಾ.ರಾ. ಗೋವಿಂದು, ಶಿವರಾಮೇಗೌಡ ಆಕ್ರೋಶ:
ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಸಾ.ರಾ. ಗೋವಿಂದು, "ಡಾ. ರಾಜ್‌ಕುಮಾರ್ ಹಾಗೂ ಅಂಬರೀಶ್ ಕಾಲದಲ್ಲಿ ಚಿತ್ರರಂಗ ನೆಲ-ಜಲದ ಹೋರಾಟಕ್ಕೆ ಮುಂಚೂಣಿಯಲ್ಲಿ ಇರುತ್ತಿತ್ತು. ಆದರೆ ಇಂದಿನ 'ಪ್ಯಾನ್ ಇಂಡಿಯಾ' ನಟರು ಕಾವೇರಿ ಹೋರಾಟಕ್ಕೆ ಬರದಿರುವುದು ಬೇಸರದ ಸಂಗತಿ" ಎಂದರು. ಇದಕ್ಕೆ ದನಿಗೂಡಿಸಿದ ಕರವೇ ಅಧ್ಯಕ್ಷ ಶಿವರಾಮೇಗೌಡ, "ಪ್ಯಾನ್ ಇಂಡಿಯಾ ನಟರನ್ನು ನಂಬಿದರೆ ಮಣ್ಣು ಸಿಗುತ್ತದೆ, ರೈತರನ್ನು ನಂಬಿದರೆ ಅನ್ನ ಸಿಗುತ್ತದೆ" ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ, ನಾಳಿನ ಕರ್ನಾಟಕ ಬಂದ್‌ಗೆ ತಾವೂ ಬೆಂಬಲ ನೀಡುತ್ತಿಲ್ಲವೆಂದು ಸ್ಪಷ್ಟಪಡಿಸಿದ ಹೋರಾಟಗಾರರು, ಸ್ಥಳೀಯ ಅಂಗಡಿ-ಮುಂಗಟ್ಟುಗಳಿಗೆ ತೆರಳಿ ಬೆಂಬಲ ನೀಡುವಂತೆ ಮನವಿ ಮಾಡಿದರು.



