ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ನೀಡಿರುವ ಆದೇಶ ಖಂಡಿಸಿ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಆಗಸ್ಟ್ 13 ಕರೆ ನೀಡಿರುವ 'ಅಖಂಡ ಕರ್ನಾಟಕ ಬಂದ್'ಗೆ ರಾಜ್ಯದಲ್ಲಿ ಮಿಶ್ರ ಬೆಂಬಲ ವ್ಯಕ್ತವಾಗಿದೆ. ಕೆಲ ಸಂಘಟನೆಗಳು ನೇರ ಬೆಂಬಲ ಸೂಚಿಸಿದ್ದರೆ, ಪ್ರಮುಖ ಖಾಸಗಿ ಹಾಗೂ ಸಾರಿಗೆ ಒಕ್ಕೂಟಗಳು ಬಂದ್‌ನಿಂದ ದೂರ ಉಳಿಯಲು ನಿರ್ಧರಿಸಿವೆ.
ವಾಟಾಳ್ ನಾಗರಾಜ್ ನೇತೃತ್ವದ ಹೋರಾಟಕ್ಕೆ ಡಾ. ರಾಜ್‌ಕುಮಾರ್ ಅಭಿಮಾನಿ ಸಂಘ, ಕನ್ನಡ ಸೇನೆ ಹಾಗೂ ಕನ್ನಡ ಜಾಗೃತಿ ವೇದಿಕೆಗಳು ಸಾಥ್ ನೀಡಿವೆ.
ಬಂದ್‌ನಿಂದ ದೂರ ಉಳಿದ ಪ್ರಮುಖ ಸಂಘಟನೆಗಳು:
ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ ಬಣ, ಶಿವರಾಮೇಗೌಡ ಬಣ ಹಾಗೂ ಆರಂಭದಲ್ಲಿ ಬೆಂಬಲಿಸಿದ್ದ ಪ್ರವೀಣ್ ಶೆಟ್ಟಿ ಬಣ ಬಂದ್‌ಗೆ ಬೆಂಬಲ ನೀಡುತ್ತಿಲ್ಲವೆಂದು ಸ್ಪಷ್ಟಪಡಿಸಿವೆ. ಪ್ರಸ್ತುತ ಉತ್ತಮ ಮಳೆಯಾಗುತ್ತಿರುವುದು ಹಾಗೂ ಸರ್ಕಾರ ಮೇಲ್ಮನವಿ ಸಲ್ಲಿಸುತ್ತಿರುವುದರಿಂದ ಬಂದ್ ಅಗತ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಇದಲ್ಲದೆ, ಖಾಸಗಿ ಸಾರಿಗೆ ಒಕ್ಕೂಟ, ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ಆಟೋ ಚಾಲಕರ ಸಂಘಗಳು, ಹೋಟೆಲ್ ಮಾಲೀಕರ ಸಂಘ ಹಾಗೂ ಖಾಸಗಿ ಶಾಲೆಗಳ ಒಕ್ಕೂಟಗಳಾದ 'ರುಪ್ಸಾ' ಮತ್ತು 'ಕ್ಯಾಮ್ಸ್' ಬಂದ್‌ಗೆ ಕೇವಲ ನೈತಿಕ ಬೆಂಬಲವಷ್ಟೇ ನೀಡಿವೆ.
ಇಂದು ಏನಿರಲಿದೆ? ಏನಿರುವುದಿಲ್ಲ?
ಬಂದ್‌ಗೆ ಬಹುತೇಕ ಸಾರಿಗೆ ಹಾಗೂ ವಾಣಿಜ್ಯ ಸಂಸ್ಥೆಗಳು ಬೆಂಬಲ ನೀಡದಿರುವುದರಿಂದ ರಾಜ್ಯಾದ್ಯಂತ ಜನಜೀವನ ಸಾಮಾನ್ಯವಾಗಿರಲಿದೆ.
ಸಾಮಾನ್ಯವಾಗಿ ಲಭ್ಯವಿರುವ ಸೇವೆಗಳು: ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ಗಳು, ಮೆಟ್ರೋ ರೈಲು, ಆಟೋ, ಟ್ಯಾಕ್ಸಿ, ಖಾಸಗಿ ಬಸ್‌ಗಳು, ಆಸ್ಪತ್ರೆ ಮತ್ತು ಮೆಡಿಕಲ್ ಶಾಪ್‌ಗಳು, ಶಾಲಾ-ಕಾಲೇಜುಗಳು, ಸರ್ಕಾರಿ ಹಾಗೂ ಸ್ಥಳೀಯ ಆಡಳಿತ ಕಚೇರಿಗಳು, ಹೋಟೆಲ್‌ಗಳು, ಅಂಗಡಿ ಮುಂಗಟ್ಟುಗಳು ಮತ್ತು ಕೈಗಾರಿಕೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.



