ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಖಾತೆ ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಹೈಕಮಾಂಡ್ ನಡುವೆ ನಡೆಯಲಿರುವ ನಿರ್ಣಾಯಕ ಸಭೆಯ ಫಲಿತಾಂಶಕ್ಕಾಗಿ ಕಾಯುತ್ತಿರುವುದಾಗಿ ಸಚಿವ ರಾಮಲಿಂಗಾರೆಡ್ಡಿ ಶನಿವಾರ ತಿಳಿಸಿದ್ದಾರೆ.
ಬೆಂಗಳೂರು ಅಭಿವೃದ್ಧಿ ಖಾತೆಯ ಬದಲಿಗೆ ಬೃಹತ್ ಮತ್ತು ಮಧ್ಯಮ ನೀರಾವರಿ ಖಾತೆ ನೀಡಿದ್ದಕ್ಕೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದ ಹಿರಿಯ ನಾಯಕ ರಾಮಲಿಂಗಾರೆಡ್ಡಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಆದರೆ, ಸರ್ಕಾರ ಅಸ್ತಿತ್ವಕ್ಕೆ ಬಂದ ಕೇವಲ ಮೂರೇ ದಿನಗಳಲ್ಲಿ ಎದುರಾಗಿರುವ ಈ ಮೊದಲ ದೊಡ್ಡ ಬಿಕ್ಕಟ್ಟನ್ನು ಶಮನಗೊಳಿಸಲು ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣ್‌ದೀಪ್ ಸಿಂಗ್ ಸುರ್ಜೇವಾಲಾ ಸೇರಿದಂತೆ ಹಿರಿಯ ನಾಯಕರು ಕಸರತ್ತು ನಡೆಸುತ್ತಿದ್ದಾರೆ.
ಭರವಸೆ ಈಡೇರದಿದ್ದಕ್ಕೆ ಬೇಸರ: ರಾಮಲಿಂಗಾರೆಡ್ಡಿ-
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, "ನಾನು ಯಾವುದೇ ನಿರ್ದಿಷ್ಟ ಖಾತೆಗಾಗಿ ಬೇಡಿಕೆ ಇಟ್ಟಿರಲಿಲ್ಲ. ಆದರೆ, ಪಕ್ಷದ ನಾಯಕತ್ವವೇ ನನಗೆ ನೀಡಿದ್ದ ಭರವಸೆ ಈಡೇರಿಸದ ಕಾರಣ ಬೇಸರವಾಗಿದೆ. ಸಿಎಂ ಶಿವಕುಮಾರ್ ಅವರೊಂದಿಗೆ ಹೋಟೆಲ್‌ನಲ್ಲಿ ಸುದೀರ್ಘವಾಗಿ ಚರ್ಚಿಸಿದ್ದೇನೆ. ಸುರ್ಜೇವಾಲಾ ಅವರೊಂದಿಗೂ ಮಾತನಾಡಿದ್ದು, ನನ್ನ ನಿಲುವನ್ನು ಸ್ಪಷ್ಟಪಡಿಸಿದ್ದೇನೆ. ಈಗ ಮುಖ್ಯಮಂತ್ರಿ ಹಾಗೂ ಸುರ್ಜೇವಾಲಾ ಅವರು ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ," ಎಂದರು.
ನೀರಾವರಿ ಖಾತೆಯ ಜೊತೆಗೆ ಹೆಚ್ಚುವರಿ ಖಾತೆ ನೀಡುವ ಪರ್ಯಾಯ ಪ್ರಸ್ತಾವನೆಗಳ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು.
ಮಂತ್ರಿಗಿರಿಗಾಗಿ ಲಾಬಿ ಮಾಡಿಲ್ಲ: "ನಾನು ಎಂದಿಗೂ ಸಚಿವ ಸ್ಥಾನಕ್ಕಾಗಿ ಅಥವಾ ನಿರ್ದಿಷ್ಟ ಖಾತೆಗಾಗಿ ಲಾಬಿ ನಡೆಸಿಲ್ಲ. 1993ರಲ್ಲಿ ಮೊದಲ ಬಾರಿಗೆ ಸಚಿವನಾದಾಗಲೂ ನಾನು ಯಾವುದೇ ಮುಖ್ಯಮಂತ್ರಿಯನ್ನು ಖಾತೆ ಕೇಳಿ ಸಂಪರ್ಕಿಸಿರಲಿಲ್ಲ. ಪಕ್ಷವೇ ನನಗೆ ಮೊದಲು ಆಫರ್ ನೀಡಿತ್ತು, ಆದರೆ ಅನಿವಾರ್ಯ ಕಾರಣಗಳಿಂದ ನಂತರ ಪರಿಸ್ಥಿತಿ ಬದಲಾಗಿದೆ."
ರಾಜೀನಾಮೆ ಅಂಗೀಕಾರಕ್ಕೆ ನಾಯಕರ ನಿರಾಕರಣೆ: "ಮುಖ್ಯಮಂತ್ರಿಗಳು ಹಾಗೂ ಸುರ್ಜೇವಾಲಾ ಇಬ್ಬರೂ ನನ್ನ ರಾಜೀನಾಮೆಯನ್ನು ಅಂಗೀಕರಿಸಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅಲ್ಲದೆ ರಾಜೀನಾಮೆ ಹಿಂಪಡೆಯುವಂತೆ ಮನವಿ ಮಾಡಿದ್ದಾರೆ."
ಸಿದ್ದರಾಮಯ್ಯ ಮೇಲೆ ವಿಶ್ವಾಸ: "ಈ ಬೆಳವಣಿಗೆಗಳಿಂದ ನಾನು ತಾಳ್ಮೆ ಕಳೆದುಕೊಂಡಿಲ್ಲ. ಹಿರಿಯ ನಾಯಕ ಸಿದ್ದರಾಮಯ್ಯ ಅವರು ಈ ಸಮಸ್ಯೆಯನ್ನು ಯಶಸ್ವಿಯಾಗಿ ಪರಿಹರಿಸುತ್ತಾರೆ ಎಂಬ ವಿಶ್ವಾಸ ನನಗಿದೆ. ಸಿದ್ದರಾಮಯ್ಯ ಹಾಗೂ ಸಿಎಂ ಶಿವಕುಮಾರ್ ಅವರು ಚರ್ಚಿಸಿದ ಬಳಿಕ ಮುಂದಿನ ನಿರ್ಧಾರ ತಿಳಿಯಲಿದೆ."
"ನನ್ನ ಅಭಿಪ್ರಾಯವನ್ನು ಪಕ್ಷದ ನಾಯಕತ್ವಕ್ಕೆ ಸ್ಪಷ್ಟವಾಗಿ ತಿಳಿಸಿ ಬಂದಿದ್ದೇನೆ. ಹಿರಿಯ ನಾಯಕರ ಸಭೆಯ ಬಳಿಕ ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡೋಣ."
ರಾಮಲಿಂಗಾರೆಡ್ಡಿ, ಸಚಿವರು.



