ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದೇಶದ ಇತಿಹಾಸದಲ್ಲಿ ಮೈಲಿಗಲ್ಲಾಗಬೇಕಿದ್ದ 'ನಾರಿ ಶಕ್ತಿ ವಂದನಾ ಅಧಿನಿಯಮ' ಮಸೂದೆಯನ್ನು ಜಾರಿಗೆ ತರುವಲ್ಲಿ ಕಾಂಗ್ರೆಸ್ ಅಡ್ಡಗಾಲು ಹಾಕುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ ಗಂಭೀರ ಆರೋಪ ಮಾಡಿದ್ದಾರೆ.
ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವ ಅವರು, ಮಹಿಳೆಯರಿಗೆ ಅಧಿಕಾರ ನೀಡುವ ಈ ಮಹತ್ವದ ಮಸೂದೆ ಯಾವುದೇ ವಿರೋಧವಿಲ್ಲದೆ, ಸರ್ವಸಮ್ಮತಿಯಿಂದ ಅಂಗೀಕಾರವಾಗಬೇಕಿತ್ತು. ಆದರೆ ಕಾಂಗ್ರೆಸ್ ತನ್ನ ರಾಜಕೀಯ ಕುತಂತ್ರದಿಂದ ಈ ಮಸೂದೆಗೆ ಅಡ್ಡಿಯುಂಟು ಮಾಡುತ್ತಿದೆ ಎಂದು ದೂರಿದ್ದಾರೆ.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ: "ಮಹಿಳಾ ಮೀಸಲಾತಿ ಮಸೂದೆಯನ್ನು ಸೋಲಿಸಲು ಕಾಂಗ್ರೆಸ್ ಹೂಡಿರುವ ತಂತ್ರಗಳು ದೇಶದ ಮಹಿಳಾ ಸಮುದಾಯಕ್ಕೆ ಬಗೆದ ದ್ರೋಹವಾಗಿದೆ" ಎಂದು ಅಶೋಕ ಕಿಡಿಕಾರಿದ್ದಾರೆ.
ಮಹಿಳಾ ಕಾಂಗ್ರೆಸ್ ವಿಸರ್ಜನೆಗೆ ಆಗ್ರಹ: ಮಹಿಳೆಯರ ಹಿತರಕ್ಷಣೆ ಮಾಡದ ಪಕ್ಷದಲ್ಲಿ ಮಹಿಳಾ ಘಟಕ ಏಕಿರಬೇಕು? ಕಾಂಗ್ರೆಸ್ ತನ್ನ ಮಹಿಳಾ ಬ್ಲಾಕ್ ಅನ್ನು ತಕ್ಷಣವೇ ವಿಸರ್ಜಿಸುವುದು ಒಳಿತು ಎಂದು ಅವರು ಲೇವಡಿ ಮಾಡಿದ್ದಾರೆ.
ಕ್ಷಮಿಸದ ಮಹಿಳಾ ಸಮುದಾಯ: ಮಹಿಳೆಯರ ದಶಕಗಳ ಕನಸನ್ನು ನುಚ್ಚುನೂರು ಮಾಡಿರುವ ಕಾಂಗ್ರೆಸ್ ಪಕ್ಷವನ್ನು ಭಾರತದ ಮಹಿಳಾ ಸಮುದಾಯ ಎಂದಿಗೂ ಕ್ಷಮಿಸುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.
ಹಿನ್ನೆಲೆ: ಕೇಂದ್ರ ಸರ್ಕಾರವು 2029ರ ಲೋಕಸಭಾ ಚುನಾವಣೆಯೊಳಗೆ ಮಹಿಳೆಯರಿಗೆ 33% ಮೀಸಲಾತಿಯನ್ನು ಜಾರಿಗೆ ತರಲು ವಿಶೇಷ ಅಧಿವೇಶನ ಕರೆದು ಸಂವಿಧಾನ ತಿದ್ದುಪಡಿ ತರಲು ಪ್ರಯತ್ನಿಸುತ್ತಿದೆ. ಆದರೆ, ಡಿಲಿಮಿಟೇಷನ್ (ಕ್ಷೇತ್ರ ಪುನರ್ ವಿಂಗಡಣೆ) ಮತ್ತು ಜನಗಣತಿಯ ವಿಚಾರವಾಗಿ ವಿರೋಧ ಪಕ್ಷಗಳು ತಕರಾರು ಎತ್ತಿರುವುದರಿಂದ ಸದನದಲ್ಲಿ ವಾಗ್ವಾದಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಆರ್. ಅಶೋಕ ಅವರು ಕಾಂಗ್ರೆಸ್ ನಿಲುವನ್ನು ಕಟುವಾಗಿ ಟೀಕಿಸಿದ್ದಾರೆ.


