ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಪೆಟ್ರೋಲ್ ಡೀಸೆಲ್ ಗ್ಯಾಸ್ ಬೆಲೆ ಏರಿಕೆ ಖಂಡಿಸಿ ಗ್ರಾಮಾಂತರ ಜಿಲ್ಲಾ ಯುವ ಕಾಂಗ್ರೆಸ್ ಹಾಗು ದೊಡ್ಡಬಳ್ಳಾಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಲಾಯಿತು.
ನಗರದ ಹಳೇ ಬಸ್ ನಿಲ್ದಾಣದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿ ಆರಂಭವಾದ ಪ್ರತಿಭಟನಾ ಮೆರವಣಿಗೆ ಜಟಕಾ ಗಾಡಿ ಮೂಲಕ ತಾಲೂಕು ಕಚೇರಿ ವೃತ್ತದವರೆಗೆ ಸಾಗಿತು.
ಬಳಿಕ ತಾಲೂಕು ಕಚೇರಿ ವೃತ್ತದಲ್ಲಿ ಪ್ರತಿಭಟನಾಕಾರರು ಸೌದೆ ಒಲೆಯಲ್ಲಿ ಟೀ ತಯಾರಿಸಿ ಕುಡಿಯುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಟಿ. ವೆಂಕಟರಮಣಯ್ಯ ಮಾತನಾಡಿ ಕರ್ನಾಟಕದಲ್ಲಿ ಇಂಧನ ದರವು ಪ್ರತಿ ಲೀಟರ್‌ಗೆ ತಲಾ ₹3 ರಷ್ಟು ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ಬೆಲೆಯು ಸುಮಾರು ₹೧೦6.೯೨ ಹಾಗೂ ಡೀಸೆಲ್ ಬೆಲೆಯು 94.1೦ ರಷ್ಟಿದೆ. ಇತರೆ ಖಾಸಗಿ ಬಂಕ್ ಗಳಲ್ಲಿ ಬೆಲೆಗಳು ಹೆಚ್ಚು ಮಾಡಿದೆ ಇದರಿಂದ ದಿನನಿತ್ಯದ ಬಳಕೆ ಮಾಡುವ ವಸ್ತುಗಳ ಬೆಲೆ ಹೆಚ್ಚಳದಿಂದ ಜನಸಾಮಾನ್ಯರ ಕೆಂಗೆಟ್ಟಿದ್ದಾರೆ.
ಅದರೆ ರಷ್ಯಾದಿಂದ ರಿಯಾಯಿತಿ ದರದಲ್ಲಿ ತೈಲ ಆಮದು ಮಾಡಿಕೊಳ್ಳಲು ಅವಕಾಶವಿದ್ದರೂ ಅಮೆರಿಕದ ಒತ್ತಡಕ್ಕೆ ಮಣಿದು ಕೇಂದ್ರ ಸರ್ಕಾರ ಕೈಚೆಲ್ಲಿದೆ.
ತೈಲದ ಮೇಲೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಧಿಸುವ ತೆರಿಗೆಯನ್ನು ಕೂಡಲೇ ಹಿಂಪಡೆಯಬೇಕು. ಯುದ್ಧ ನಿಲ್ಲಿಸಿ, ಅನ್ಯದೇಶಗಳ ಆಂತರಿಕ ವ್ಯವಹಾರಗಳಲ್ಲಿ ತಲೆಹಾಕದಂತೆ ಅಮೆರಿಕದ ಸಾಮ್ರಾಜ್ಯ ಶಾಹಿಗಳ ಮೇಲೆ ಭಾರತವು ಒತ್ತಡ ಹೇರಬೇಕು’ ಜೊತೆಗೆ ನೀಟ್ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ನಂತರ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಜಿ. ಲಕ್ಷ್ಮಿಪತಿ, ಮಾತನಾಡಿ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಕೇಂದ್ರದ ಬಿಜೆಪಿ ಸರ್ಕಾರ ಹಾಳು ಮಾಡಿತು ಹಾಗು ಕೇಂದ್ರ ಸರ್ಕಾರದ ಅವೈಜ್ಞಾನಿಕ ನೀತಿಗಳ ಪರಿಣಾಮವಾಗಿ ದಿನನಿತ್ಯ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಸಾಮಾನ್ಯ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆ ಯಲ್ಲಿ ಡಿ ಪಿ ಎ ಅಧ್ಯಕ್ಷ ಚುಂಚೆಗೌಡ,ಸದಸ್ಯ ಅಂಜನ್ ಮೂರ್ತಿ, ಕಾಂಗ್ರೆಸ್ ಮುಖಂಡರಾದ ಆದಿತ್ಯ ನಾಗೇಶ್, ಅಪ್ಪಿ ವೆಂಕಟೇಶ್, ಮುನಿರಾಜ್, ಕಾಂತರಾಜ್, ಸಿದ್ದರಾಮಯ್ಯ, ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳು ದೊಡ್ಡಬಳ್ಳಾಪುರ ನಗರ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಆರ್.ವಿ. ಮನು ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.


