ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಗರಸಭೆ ವ್ಯಾಪ್ತಿಯೊಳಗಿನ ಹಲವು ಬ್ಲಾಕ್ ಸ್ಪಾಟ್‌ಗಳು ಸುಮಾರು 10 ವರ್ಷಗಳಿಂದ ನಿರಂತರವಾಗಿ ಕಸ ಹಾಕುವ ಸ್ಥಳಗಳಾಗಿ ಮಾರ್ಪಟ್ಟಿದ್ದವು. ಸಾರ್ವಜನಿಕರು ಅಜಾಗರೂಕತೆಯಿಂದ ಕಸದ ಅಡ್ಡೆಗಳಾಗಿದ್ದ ಈ ಪ್ರದೇಶಗಳು ನಗರದ ಸೌಂದರ್ಯಕ್ಕೂ ಹಾಗೂ ಸಾರ್ವಜನಿಕ ಆರೋಗ್ಯಕ್ಕೂ ಹಾನಿ ಉಂಟುಮಾಡುತ್ತಿದವು. ಪೌರಾಯುಕ್ತರ ಆದೇಶದಂತೆ ನಗರಸಭೆ ವತಿಯಿಂದ ಇಂತಹ ಕಸದ ಪಾಯಿಂಟ್‌ಗಳನ್ನು ಗುರುತಿಸಿ, ಅವುಗಳನ್ನು ಸುಂದರೀಕರಣಗೊಳಿಸುವ ಮಹತ್ವದ ಕಾರ್ಯ ಕೈಗೊಳ್ಳಲಾಗಿದೆ.
ಬ್ಯೂಟಿಫಿಕೇಷನ್ ಕಾರ್ಯದಲ್ಲಿ ಗೋಡೆ ಚಿತ್ರಕಲೆ, ಹಸಿರು ಗಿಡಗಳ ನೆಡುವಿಕೆ, ಸ್ವಚ್ಛತಾ ಸಂದೇಶಗಳ ಅಳವಡಿಕೆ ಹಾಗೂ ಪರಿಸರ ಸ್ನೇಹಿ ವಿನ್ಯಾಸಗಳನ್ನು ರೂಪಿಸಲಾಗಿದೆ. ಇದರಿಂದ ಕಸ ಹಾಕುತ್ತಿದ್ದ ಸ್ಥಳಗಳು ಈಗ ಸಾರ್ವಜನಿಕರಿಗೆ ಆಕರ್ಷಕ ಮತ್ತು ಸ್ವಚ್ಛ ಪ್ರದೇಶಗಳಾಗಿ ಪರಿವರ್ತನೆಗೊಂಡಿವೆ. ಈ ಕಾರ್ಯ ಜನರಲ್ಲಿ ಸ್ವಚ್ಛತೆಯ ಅರಿವು ಮೂಡಿಸುವುದರ ಜೊತೆಗೆ, ನಗರವನ್ನು ಸುಂದರ ಹಾಗೂ ಆರೋಗ್ಯಕರವಾಗಿಡುವ ದಿಸೆಯಲ್ಲಿ ಮಹತ್ವದ ಹೆಜ್ಜೆಯಾಗಿದೆ.
ನಗರಸಭೆಯ ಈ ಕಾರ್ಯದಿಂದ ಸಾರ್ವಜನಿಕರಲ್ಲಿ “ಕಸ ಹಾಕಬೇಡಿ – ನಗರವನ್ನು ಕಾಪಾಡಿ” ಎಂಬ ಜಾಗೃತಿ ಹೆಚ್ಚುತ್ತಿದ್ದು, ಸ್ವಚ್ಛ ದೊಡ್ಡಬಳ್ಳಾಪುರ ನಿರ್ಮಾಣದ ಕನಸು ನನಸಾಗುತ್ತಿದೆ.


