ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪೆಟ್ರೋಲ್ನಲ್ಲಿ ನಿಯಮ ಮೀರಿ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂದು ಆರೋಪಿಸಿ ಬೆಂಗಳೂರು ಕೇಂದ್ರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಮಂತ್ರಿ ಮಾಲ್ ಸಮೀಪ ಬೃಹತ್ ಪ್ರತಿಭಟನೆ ನಡೆಯಿತು. ಅಧ್ಯಕ್ಷ ಜೆ.ಸರವಣನ್ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ರಿಜ್ವಾನ್ ಅರ್ಷದ್ ಅವರ ಮಾರ್ಗದರ್ಶನದಲ್ಲಿ 7 ಜಿಲ್ಲೆಗಳ 60 ಪೆಟ್ರೋಲ್ ಬಂಕ್ಗಳಿಂದ ಸಂಗ್ರಹಿಸಿದ ಇಂಧನ ಮಾದರಿಗಳ ಲ್ಯಾಬ್ ಪರೀಕ್ಷೆಯಲ್ಲಿ ಹೆಚ್ಚುವರಿ ಎಥೆನಾಲ್ ಮಿಶ್ರಣ ಪತ್ತೆಯಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಲ್ಯಾಬ್ ವರದಿ ನೀಡಿದರೂ ಕೇಂದ್ರ ಸರ್ಕಾರ ತೈಲ ಕಂಪನಿಗಳನ್ನು ರಕ್ಷಿಸಲು ಮೌನ ವಹಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೆಚ್ಚಿನ ಎಥೆನಾಲ್ನಿಂದ ವಾಹನಗಳ ಮೈಲೇಜ್ ಕಡಿಮೆಯಾಗುತ್ತಿದ್ದು, ಎಂಜಿನ್ ತಾಂತ್ರಿಕ ದೋಷಗಳಿಂದ ವಾಹನ ಮಾಲೀಕರು ದುರಸ್ತಿ ವೆಚ್ಚ ಭರಿಸುವಂತಾಗಿದೆ.
ಹೀಗಾಗಿ ಹಾನಿಗೊಳಗಾದ ವಾಹನ ಮಾಲೀಕರಿಗೆ ವಿಮಾ ಕಂಪನಿಗಳು ಅಥವಾ ಕೇಂದ್ರ ಸರ್ಕಾರದಿಂದ ಪರಿಹಾರ ಒದಗಿಸಬೇಕು ಮತ್ತು ನಿಯಮ ಉಲ್ಲಂಘಿಸಿದ ತೈಲ ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು. ಬಳಿಕ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.




