ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಶೀಘ್ರ ಹಾಗೂ ಸೌಹಾರ್ದಯುತವಾಗಿ ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಮುಂಬರುವ ಆಗಸ್ಟ್ 21, 22 ಮತ್ತು 23 ರಂದು ‘ಸಮಾಧಾನ್ ಸಮರೋಹ್' ಎಂಬ ವಿಶೇಷ ಲೋಕ್ ಅದಾಲತ್ ಆಯೋಜಿಸಲಾಗಿದೆ. ಈ ಪೈಕಿ ಚಿತ್ರದುರ್ಗ ಜಿಲ್ಲೆಗೆ ಸಂಬAಧಿಸಿದ 58 ಪ್ರಕರಣಗಳನ್ನು ರಾಜಿ ಸಂಧಾನಕ್ಕೆ ಅರ್ಹವೆಂದು ಗುರುತಿಸಿ ಪ್ರಕರಣಗಳ ಇತ್ಯರ್ಥಕ್ಕೆ ಪ್ರಯತ್ನಿಸಲಾಗುತ್ತಿದೆ ಎಂದು ಉಚ್ಚ ನ್ಯಾಯಾಲಯ ಹಾಗೂ ಜಿಲ್ಲಾ ನ್ಯಾಯಾಲಯದ ಆಡಳಿತಾತ್ಮಕ ನ್ಯಾಯಮೂರ್ತಿ ವಿ.ಶ್ರೀಶಾನಂದ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಕುರಿತು ಮಾಹಿತಿ ಹಂಚಿಕೊAಡರು.
ನ್ಯಾಯಾಲಯಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ತೀರ್ಪು ವಿಳಂಬವಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದ್ದು, ಈ ನಿಟ್ಟಿನಲ್ಲಿ ಮಧ್ಯಸ್ಥಿಕೆ ಕೇಂದ್ರಗಳು ಹಾಗೂ ಲೋಕ್ ಅದಾಲತ್‌ಗಳ ಮೂಲಕ ಸಂಧಾನದ ಹಾದಿಯಲ್ಲಿ ಪ್ರಕರಣಗಳನ್ನು ಮುಗಿಸುವುದು ಉಭಯ ಪಕ್ಷಗಾರರಿಗೂ ಲಾಭದಾಯಕವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ 58 ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಪ್ರಕ್ರಿಯೆಗಳು ಈಗಾಗಲೇ ಆರಂಭವಾಗಿವೆ. ಇದಕ್ಕೆ ಜಿಲ್ಲಾಡಳಿತ, ವಕೀಲರು ಹಾಗೂ ಪಕ್ಷಗಾರರ ಸಹಕಾರ ಅತ್ಯಗತ್ಯವಾಗಿದೆ ಎಂದರು.
ಪಕ್ಷಕಾರರಿಗೆ ಇದೊಂದು ಸುವರ್ಣಾವಕಾಶವಾಗಿದ್ದು, ತಮ್ಮ ಜೀವಿತಾವಧಿಯಲ್ಲಿ ಪ್ರಕರಣಗಳನ್ನು ಸುಖಾಂತ್ಯಗೊಳಿಸಿಕೊಳ್ಳಲು ಇದನ್ನು ಬಳಸಿಕೊಳ್ಳಬೇಕು. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ವಕೀಲರ ಸಂಘದ ಸದಸ್ಯರು ಒಗ್ಗೂಡಿ ಈ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಬೇಕು. ಗುರುತಿಸಲಾದ ಪ್ರಕರಣಗಳ ಪಕ್ಷಗಾರರಿಗೆ ನೋಟಿಸ್ ನೀಡಿ, ಅವರನ್ನು ಕರೆಸಿ ಚರ್ಚಿಸಿ, ರಾಜಿ ಮೂಲಕ ಸಮಸ್ಯೆ ಬಗೆಹರಿಸಲು ಮನ ಒಲಿಸಲಾಗುವುದು. ಜಿಲ್ಲೆಯ ಪ್ರಧಾನ ನ್ಯಾಯಾಧೀಶರು ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಿಗೆ ಬೇರೆಡೆ ವರ್ಗಾವಣೆಯಾಗಿದೆ. ಆದರೂ ತುಂಬಾ ಆಸಕ್ತಿ ವಹಿಸಿ ಪ್ರಕರಣಗಳ ಗುರುತಿಸಿ ಪಕ್ಷಗಾರರನ್ನು ಸಂಪರ್ಕಿಸಲು ಕೆಲಸ ಮಾಡುತ್ತಿದ್ದಾರೆ ಎಂದು ನ್ಯಾಯಮೂರ್ತಿ ವಿ.ಶ್ರೀಶಾನಂದ ತಿಳಿಸಿದರು.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ರಾಜ್ಯಾದ್ಯಂತ ಒಟ್ಟು 4,328 ಪ್ರಕರಣಗಳನ್ನು ಈ ಪ್ರಕ್ರಿಯೆಗಾಗಿ ಗುರುತಿಸಲಾಗಿದೆ. ಇದರಲ್ಲಿ ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ಅಂದರೆ 1,245 ಪ್ರಕರಣಗಳಿದ್ದರೆ, ಬೆಂಗಳೂರು ಗ್ರಾಮಾಂತರದಲ್ಲಿ 18 ಪ್ರಕರಣಗಳಿವೆ. ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳ ಪ್ರಕರಣಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಸುಪ್ರೀಂ ಕೋರ್ಟ್ ಹಂತಕ್ಕೆ ಹೋಗಿರುವ ಪ್ರಕರಣಗಳಲ್ಲಿನ ಉಭಯ ಪಕ್ಷಕಾರರನ್ನು ಕರೆಸಿ, ಅವರಿಗೆ ನ್ಯಾಯಾಲಯದ ದೃಷ್ಟಿಯಿಂದ ಯಾವ ರೀತಿ ಸಮಾಧಾನ ಮತ್ತು ರಾಜಿಸೂತ್ರಗಳನ್ನು ಏರ್ಪಡಿಸಿಕೊಳ್ಳಬಹುದು ಎಂಬ ಬಗ್ಗೆ ಚಿಂತನೆ ನಡೆಸಲಾಗುವುದು ಎಂದರು.
ಕಾನೂನು ಸೇವಾ ಪ್ರಾಧಿಕಾರವು ಸಾರ್ವಜನಿಕರ ಸೇವೆಗಾಗಿ ದಿನದ 24 ಗಂಟೆ ತೆರೆದಿರುತ್ತದೆ. ರಜಾ ದಿನಗಳಲ್ಲಿಯೂ ಸಹ ಅಧಿಕಾರಿಗಳು ಮತ್ತು ನ್ಯಾಯಾಧೀಶರು ಲಭ್ಯವಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬಹುದು. ವಿಶೇಷ ಲೋಕ ಅದಾಲತ್ ಹೊರತಾಗಿಯೂ ಕಾನೂನು ಸೇವಾ ಪ್ರಾಧಿಕಾರ ಪಕ್ಷಗಾರರು ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ಬಯಸಿದರೆ ವೇದಿಕೆ ಒದಗಿಸುತ್ತದೆ. ಪ್ರತಿಯೊಬ್ಬರಿಗೂ ಉಚಿತವಾಗಿ ಕಾನೂನಿನ ಅರಿವು ನೀಡುತ್ತದೆ. ವಿಶೇಷವಾಗಿ ದೀನದಲಿತರು, ಕೋಮು ಹಿಂಸಾಚಾರಕ್ಕೆ ಒಳಗಾದವರು ಮತ್ತು ಪ್ರವಾಹ ಅಥವಾ ಬರಗಾಲದಂತಹ ನೈಸರ್ಗಿಕ ವಿಕೋಪಕ್ಕೆ ತುತ್ತಾದವರು ವಾರ್ಷಿಕ ವರಮಾನದ ಆಧಾರದ ಮೇಲೆ ಉಚಿತ ಕಾನೂನು ನೆರವು ಪಡೆಯಬಹುದು. ನ್ಯಾಯಾಲಯದ ಶುಲ್ಕ ಸಹ ಪಾವತಿಸಲಾಗುತದೆ. ಕಾನೂನು ಸೇವಾ ಪ್ರಾಧಿಕಾರದ ವ್ಯವಸ್ಥೆ ತಾಲ್ಲೂಕು ಮುನಿಸಿಪ್ ನ್ಯಾಯಾಲಯದಿಂದ ಹಿಡಿದು ಸರ್ವೋಚ್ಛ ನ್ಯಾಯಾಲಯ ವರೆಗೆ ಕಾರ್ಯನಿರ್ವಹಿಸುತ್ತದೆ ಎಂದರು.
ಈ ಬೃಹತ್ ಲೋಕ್ ಅದಾಲತ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ಪತ್ರಕರ್ತರ ಪಾತ್ರ ಬಹಳ ದೊಡ್ಡದಿದೆ. ಸಾರ್ವಜನಿಕರಿಗೆ, ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದ ಜನರಿಗೆ ಪತ್ರಿಕೆ ಮತ್ತು ಸ್ಥಳೀಯ ಚಾನೆಲ್‌ಗಳ ಮೂಲಕ ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕು ಎಂದು ನ್ಯಾಯಮೂರ್ತಿ ವಿ.ಶ್ರೀಶಾನಂದ ಕೋರಿದರು.
ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಮಂಜೂರು :
ಚಿತ್ರದುರ್ಗದ ಈಗಿನ ನ್ಯಾಯಾಲಯದ ಕಟ್ಟಡ ಅತ್ಯಂತ ಹಳೆಯದಾಗಿದ್ದು, ಹೆಚ್ಚುತ್ತಿರುವ ಜನದಟ್ಟಣೆಗೆ ಸ್ಥಳಾವಕಾಶದ ಕೊರತೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರದುರ್ಗಕ್ಕೆ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವನ್ನು ಮಂಜೂರು ಮಾಡಲು ತೀರ್ಮಾನಿಸಿದೆ. ಜಿಲ್ಲಾಡಳಿತ ಈಗಾಗಲೇ ಅಗತ್ಯ ಜಾಗವನ್ನು ಗುರುತಿಸಿದ್ದು, ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒಳಗೊಂಡ ನ್ಯಾಯಾಲಯದ ಕಟ್ಟಡ ನಿರ್ಮಾಣಕ್ಕೆ ನೀಲನಕ್ಷೆ ರೂಪಿಸಲಾಗುವುದು. ಇದಕ್ಕೆ ಸರ್ಕಾರ ಲೋಕೋಪಯೋಗಿ ಇಲಾಖೆ ಅನುದಾನ ಬಿಡುಗಡೆ ಜಿಲ್ಲಾ ಪ್ರಧಾನ ನ್ಯಾಯಾಧೀಶರು ಮತ್ತು ವಕೀಲರ ಸಂಘದವರು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ. ಈ ವಿಚಾರದಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಗ್ಗಟ್ಟಿನಿಂದ ಸರ್ಕಾರವನ್ನು ಒತ್ತಾಯಿಸಬೇಕು ಎಂದರು.
ಸೂಕ್ತ ಜಾಗ ಮತ್ತು ಕಟ್ಟಡದ ವ್ಯವಸ್ಥೆ ಇಲ್ಲದ ಕಾರಣ, ಹೆಚ್ಚುವರಿ ಜಿಲ್ಲಾ ನ್ಯಾಯಾಲಯವನ್ನು ಪರ್ಯಾಯವಾಗಿ ಚಳ್ಳಕೆರೆಗೆ ಸ್ಥಳಾಂತರಿಸುವ ಮಾತುಕತೆಗಳು ನಡೆದಿದ್ದವು. ಆದರೆ ಈ ಬಗ್ಗೆ ಯಾವುದೇ ಅಂತಿಮ ನಿರ್ಧಾರವನ್ನು ಕೈಗೊಂಡಿಲ್ಲ ಎಂದು ನ್ಯಾಯಮೂರ್ತಿ ವಿ.ಶ್ರೀಶಾನಂದ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಈ ವೇಳೆ ಜಿಲ್ಲಾ ಸತ್ರ ಮತ್ತು ಪ್ರಧಾನ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ರೋಣ ವಾಸುದೇವ, ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜು, ವಕೀಲರ ಸಂಘದ ಅಧ್ಯಕ್ಷ ಮಹೇಶ್ವರಪ್ಪ ಸೇರಿದಂತೆ ಇತರೆ ನ್ಯಾಯಾಧೀಶರು ಉಪಸ್ಥಿತರಿದ್ದರು.


