ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
"ಸ್ವಚ್ಛ ಪರಿಸರವು ಆರೋಗ್ಯಕರ ಜೀವನಕ್ಕೆ ಪೂರಕವಾಗಿದೆ. ಮಾನವನ ಉತ್ತಮ ಜೀವನ ನಿರ್ವಹಣೆಯಲ್ಲಿ ಹಚ್ಚ ಹಸಿರಿನ ಪರಿಸರ ನಮ್ಮೆಲ್ಲರ ಏಳಿಗೆಗೆ ಸಾಕ್ಷಿಯಾಗಿದ್ದು, ಪ್ರತಿಯಾಗಿ ನಾವೆಲ್ಲರೂ ಪ್ರಕೃತಿಗೆ ಹಾನಿ ಮಾಡದೇ ಸಹಕರಿಸುತ್ತಾ ಸಾಗಬೇಕು" ಎಂದು ಸರ್ಕಾರಿ ವೈದ್ಯಕೀಯ ಕಾಲೇಜಿನ ಡೀನ್ ಹಾಗೂ ನಿರ್ದೇಶಕ ಡಾ. ಬಿ.ವೈ. ಯುವರಾಜ್ ತಿಳಿಸಿದರು.
ಚಿತ್ರದುರ್ಗ ನಗರದ ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯ ವತಿಯಿಂದ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದ್ದ 'ವಿಶ್ವ ಪರಿಸರ ದಿನಾಚರಣೆ' ಕಾರ್ಯಕ್ರಮದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳೊಂದಿಗೆ ಗಿಡ ನೆಟ್ಟು ಅವರು ಮಾತನಾಡಿದರು.
ಪರಿಸರ ರಕ್ಷಣೆ ನಮ್ಮ ಆದ್ಯ ಕರ್ತವ್ಯ:
ಮುಂದುವರಿದು ಮಾತನಾಡಿದ ಡಾ. ಯುವರಾಜ್, "ಪರಿಸರದೊಂದಿಗೆ ಬೆರೆತಿದ್ದ ನಮ್ಮ ಪೂರ್ವಜರ ಜೀವನ ಪದ್ಧತಿಗೂ ಹಾಗೂ ಪ್ರಸ್ತುತ ನಮ್ಮೆಲ್ಲರ ಜೀವನ ಪದ್ಧತಿಗೂ ಬಹಳ ಅಂತರವಿದೆ.
ಈ ಕಾರಣದಿಂದಾಗಿ ಪರಿಸರ ರಕ್ಷಣೆ ಹಾಗೂ ನೈರ್ಮಲ್ಯ ವಾತಾವರಣ ನಿರ್ಮಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಕಾಲೇಜಿನ ಆವರಣದಲ್ಲಿ ಪ್ರತಿಯೊಬ್ಬರೂ ಸಸಿಗಳನ್ನು ನೆಟ್ಟು, ನೀರೆರೆದು ಪೋಷಿಸಬೇಕು" ಎಂದು ವೈದ್ಯಕೀಯ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾಲೇಜಿನ ಅಕಾಡೆಮಿಕ್ ರಿಜಿಸ್ಟ್ರಾರ್ ಡಾ. ಪಿ. ಚಂದ್ರಿಕಾ, ಅಧಿಕಾರಿಗಳಾದ ವಿಶ್ವಾಸ್, ಡಾ. ಅಶ್ವಿನಿ ಎಲ್.ಹೆಚ್ ಸೇರಿದಂತೆ ಕಾಲೇಜಿನ ಬೋಧಕ ಸಿಬ್ಬಂದಿ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ಉಪಸ್ಥಿತರಿದ್ದು, ಗಿಡ ನೆಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.



