ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಕನ್ನಡದಾರಿಯಲ್ಲಿ ಸಾಗಿದಷ್ಟು ಇದು ಬಲುವಿಸ್ತಾರ. ಜಗತ್ತಿನ ಅನೇಕ ಭಾಷೆಗಳು ಕಣ್ಣು ಬಿಡುವ ಹೊತ್ತಿಗಾಗಲೇ ಕನ್ನಡ ತಾನಾಗಲೇ ಬಲಿಷ್ಠ ದೇಹಿಯಾಗಿ ಬೆಳೆದಿತ್ತು. ಕನ್ನಡಿಗರು ಪ್ರಾರಂಭದಿಂದಲೇ ಒಕ್ಕೊರಲಿನಿಂದ ಏನಾದರೂ ಕನ್ನಡಕ್ಕಾಗಿ ಅರ್ಪಣಾ ಮನೋಭಾವದಿಂದ ತಲೆಯೆತ್ತಿ ನಿಂತಿದ್ದರೆ.
ಆಂಗ್ಲವನ್ನು ಅಲುಗಿಸುವಷ್ಟು ಎತ್ತರಕ್ಕೆ ಬೆಳೆಯುತ್ತಿತ್ತು. ಆಂಗ್ಲವನ್ನು ಅಲುಗಿಸುವಷ್ಟಲ್ಲ ಆಂಗ್ಲ ಜಗತ್ತಿನಲ್ಲಿ ಇಣುಕುವುದೇ ಕಷ್ಟವಾಗುತ್ತಿತ್ತೇನೋ. ಏಕೆಂದರೆ ನಮ್ಮ ಕನ್ನಡಕ್ಕಿರುವುದು ಎರಡುವರೆ ಸಾವಿರ ವರ್ಷಗಳ ಇತಿಹಾಸ. ಆಂಗ್ಲಕ್ಕೆ ಇರುವುದು ೬೦೦ ವರ್ಷಗಳ ಇತಿಹಾಸ ಅಷ್ಟೇ, ಈ ಹಿರಿತನವನ್ನು ಗಮನಿಸಿದಾಗ ನಮಗನಿಸಬಹುದಲ್ಲವೇ ಕನ್ನಡ ಜಗತ್ತಿನ ಬಹು ಎತ್ತರದ ಸ್ಥಾನದಲ್ಲಿ ಇರಬೇಕಾಗಿತ್ತೆಂದು.
ಜಗದ ಮನು ಕುಲಕ್ಕೆ ಸಂಸ್ಕಾರದ ಪಾಠ ಮಾಡಿದ ವಚನ ಸಾಹಿತ್ಯದ ಕೊಡುಗೆಯನ್ನು ಕೊಟ್ಟ ಈ ನಮ್ಮ ಕನ್ನಡವೇನು ಕಮ್ಮಿಯಲ್ಲ. ನಮ್ಮ ನಾಡಿಗೆ, ನಮ್ಮ ನಾಡಿನ ಜನರಿಗೆ ಸೈರಣೆಯೆಂಬುದು ಅಗೆದಷ್ಟು ಬಗೆದಷ್ಟು ಬರಿದಾಗದು. ಬಹುಶಃ ಈ ಸೈರಣೆಗೆ ನಮ್ಮ ಭಾಷೆಯ ವೈಶಿಷ್ಟ್ಯವೇ ಕಾರಣವೆಂದರೇ ಅದು ವಾಸ್ತವವೇ ಸರಿ.
ಕರ್ನಾಟಕ ಜಗದ ಜೋಕಾಲಿ ಎಂಬಂತೆ ನಮ್ಮ ಭಾರತ ವಿವಿಧ ರಾಜ್ಯಗಳಿಂದ ಬಂದು ಇಲ್ಲಿ ಬದುಕಿನ ಜೋಕಾಲಿ ಕಟ್ಟಿಕೊಂಡು ಆಡುವರಲ್ಲದೆ, ಪ್ರಪಂಚದ ನಾನಾ ಮೂಲೆಗಳಿಂದ ಬಂದವರಿಗೇನು ಕಮ್ಮಿಯಿಲ್ಲ.
ಭಾರತದ ಮೂಲೆ ಮೊಲೆಗಳಿಂದ ವಿವಿಧ ರಾಜ್ಯಗಳಿಂದ ವೈವಿಧ್ಯಮಯ ಭಾಷೆ ಸಂಸ್ಕೃತಿಯ ಜನ ನಮ್ಮನಾಡಿನ ನೆಲದಲ್ಲಿ ಆಶ್ರಯ ಪಡೆದಿದ್ದಾರೆ. ಅದು ಯಾವ ಮಟ್ಟಿಗೆ ಎಂದರೆ, ಅವರೇ ನಮ್ಮ ನಾಡಿನ ಮೂಲ ನಿವಾಸಿಗಳು ಎಂಬಂತೆ, ಕನ್ನಡಿಗರಾದ ನಾವುಗಳೇ ಪರದೇಶಿಗಳೆಂಬಂತೆ ಪಾಪ ಎನ್ನುವ ಹಾಗೆ ಬದುಕುತ್ತಿದ್ದೇವೆ. ಬರೀ ನಾವಷ್ಟೇ ಪಾಪವಲ್ಲ ನಮ್ಮ ಭಾಷೆಯು ಪಾಪ ಎಂಬಂತೆ ಮೂಲೆ ಗುಂಪಾಗುತ್ತಿದೆಯೇನೋ ಎನ್ನುವಂತಹ ವಾತಾವರಣ ಸೃಷ್ಟಿಯಾಗುತ್ತಿದೆ. ಇದಕ್ಕೆ ಕಾರಣ ನಮ್ಮಗಳ ಮಿತಿಮೀರಿದ ಸೈರಣೆ ಜೊತೆಗೆ ಸರ್ಕಾರಗಳ ಬೇಜವಾಬ್ದಾರಿಯಿಂದ ಕೂಡಿದ ಮಲತಾಯಿ ಧೋರಣೆಗಳು. ಪ್ರಾದೇಶಿಕ ಭಾಷೆಗಳನ್ನು ತುಳಿದುಸದ್ದಿಲ್ಲದೆ ಹಿಂದಿಯನ್ನು ದೇಶದೆಲ್ಲೆಡೆ ಹೇರುವ ಕೇಂದ್ರ ಸರ್ಕಾರದ ಪ್ರಯತ್ನ ಗೊತ್ತಿಲ್ಲದ್ದೇನಲ್ಲ.
ಈಗಾಗಲೇ ಹೊರರಾಜ್ಯಗಳಿಂದ ಹೊಟ್ಟೆಹೊರೆಯಲು ಬಂದವರು, ನಮ್ಮ ನಾಡಿನಲ್ಲಿ ನಾವುಗಳು ನಮ್ಮ ನುಡಿಯನ್ನು ಬಿತ್ತಿ ಬೆಳದ ಜಾಗದಲ್ಲೇ, ನಮ್ಮ ನುಡಿಯನ್ನು ಹರಗಿ ತಮ್ಮ ನುಡಿಯೆಂಬ ಸಸಿಯನ್ನು ನಾಟಿಮಾಡಿ ಗೊಬ್ಬರ ನೀರು ಹಾಕಿ ಪೋಷಿಸುತ್ತಿರುವುದು ನಮ್ಮ ಮಂದದೃಷ್ಟಿಗೆ ಕಾಣದಂತಾಗಿದೆ. ಇನ್ನು ಕೆಲ ನಮ್ಮವರೇ ಇವರ ಜೊತೆ ಸೇರಿಕೊಂಡು ಅವರ ಬೆಳೆಯನ್ನು ಎತ್ತರಿಸಲು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಕಾರಣಕರ್ತರಾಗುತ್ತಿದ್ದಾರೆ.
ಉದಾಹರಣೆ ಎಂಬಂತೆ ಒಂದಷ್ಟು ವಿಷಯಗಳನ್ನು ಹಾಗೇ ಸುಮ್ಮನೆ ಮಾತನಾಡೋಣ. ನಮ್ಮ ನೆರೆಯ ಕುಟುಂಬವೊಂದು ಉತ್ತರ ಭಾರತದ ರಾಜ್ಯವೊಂದರಿಂದ ಅಥವಾ ಇನ್ಯಾವುದೋ ರಾಜ್ಯದಿಂದ ಅವರ ಅಪ್ಪನ ಕಾಲಕ್ಕೋ ಅಥವಾ ತಾತನ ಕಾಲಕ್ಕೋ ನಮ್ಮ ಕರ್ನಾಟಕಕ್ಕೆ ವಲಸೆ ಬಂದಿದೆಯೆಂದು ಇಟ್ಟುಕೊಳ್ಳೋಣ. ಅವರು ಬಂದು ಐದಾರು ದಶಕಗಳು ಕಳೆದರೂ ಅವರ ಒಂದು ಕುಟುಂಬದ ಹಿರಿ ತಲೆಯಿಂದ ಹಿಡಿದು ಕಿರಿತಲೆಯವರೆಗೂ ಯಾರೊಬ್ಬರಿಗೂ ಕನ್ನಡ ಬರುತ್ತಿಲ್ಲ.
ಆದರೂ ಇಲ್ಲಿ ಅವರ ಜೀವನಕ್ಕೆ ವ್ಯವಹಾರಕ್ಕೆ ಯಾವುದೇ ರೀತಿಯ ತೊಂದರೆಯಿಲ್ಲದಂತೆ ಬದುಕಿ ಬಾಳುತ್ತಿದ್ದಾರೆ. ಕಾರಣವೇನೆಂದರೆ ಅವರು ಇಲ್ಲಿಗೆ ಬಂದು ನೆಲೆಸಿದಾಗಲಿಂದಲೂ ತಮ್ಮ ಭಾಷೆಯನ್ನೇ ಮಾತನಾಡುತ್ತಾರೆ. ತಮ್ಮ ಭಾಷೆಯಲ್ಲಿ ವ್ಯವಹರಿಸುತ್ತಾರೆ. ನಮ್ಮ ಭಾಷೆ ಅವರಿಗೆ ಎಂದಿಗೂ ತೊಡಕಾಗಲಿಲ್ಲ. ಯಾಕೆಂದರೆ ನಾವುಗಳು ಅವರ ಭಾಷೆ ಗೊತ್ತಿಲ್ಲದಿದ್ದರೂ, ಅವರ ಭಾಷೆಯಲ್ಲಿಯೇ ತೊಡರು ತೊಡರಾಗಿಯಾದರೂ ಮಾತನಾಡಿ ಅವರಿಗೆ ಸಹಕರಿಸಿದ್ದೇವೆ ಮತ್ತು ಸಹಿಸಿಕೊಂಡಿದ್ದೇವೆ. ನಾವೆಷ್ಟು ಉದಾರಿಗಳೆಂದರೆ ಅವರಿಗಾಗಿ ನಾವು ಅವರ ಭಾಷೆಯನ್ನು ಕಲಿಯುತ್ತೇವೆ, ಅವರ ಭಾಷೆಯಲ್ಲಿ ಸಂಪರ್ಕಿಸುತ್ತೇವೆ. ಆದರೆ ನಮಗಾಗಿ ಅವರಿಗೆ ನಮ್ಮ ಭಾಷೆಯನ್ನು ಕಲಿಸುವುದಿಲ್ಲ. ನಮ್ಮಂತಹ ಗುಗ್ಗುಗಳನ್ನು ನೋಡಿ, ಮನದಲ್ಲೇ ನಕ್ಕು ಅವರ ಭಾಷೆ ನಮಗೆ ಕಲಿಸುತ್ತಾರೆ.
ಕನ್ನಡಿಗರಾದ ನಾವು ಹೀಗೆ ಅವರಿಗೆ ಸಹಕರಿಸುತ್ತಾ ಅವರೊಂದಿಗೆ ಮುಂದೆ ನಾವು ಸಹ ಬಿಹಾರಿಗಳೋ, ಅಸ್ಸಾಮಿಗಳೋ, ಗುಜರಾತಿಗಳೋ, ರಾಜಸ್ಥಾನಿಗಳೋ, ಹಿಂದಿವಾಲಗಳೋಆಗಿಬಿಡುತ್ತೇವೆ. ಅಷ್ಟು ಸಾಲದೆಂಬಂತೆ ತಮಿಳು, ಮರಾಠಿ ಮಲೆಯಾಳಿ, ತೆಲುಗು ಭಾಷೆಗಳು ನಮ್ಮಗಳ ಮೇಲೆ ಕಮ್ಮಿ ಪ್ರಭಾವ ಬೀರಿಲ್ಲ.
ಹಾಗೆಂದ ಮಾತ್ರಕ್ಕೆ ಹೊರ ರಾಜ್ಯಗಳಿಂದ ವಲಸೆ ಬಂದ ಅನ್ಯ ಭಾಷಿಕರೆಲ್ಲರೂ ಹೀಗೆ ಇರುತ್ತಾರೆ ಎಂದಲ್ಲ. ನಮ್ಮ ನಾಡಿನಲ್ಲಿ ಜೀವನ ಕಟ್ಟಿಕೊಂಡು, ನಮ್ಮ ಭಾಷೆಯನ್ನು ಕಲಿತು, ನಮ್ಮ ಭಾಷೆಯಲ್ಲಿ ವ್ಯವಹರಿಸಿ ನಮ್ಮ ನಾಡು ನುಡಿಯ ಋಣ ತೀರಿಸುತ್ತಿರುವವರು ಇದ್ದಾರೆ. ಅಂತವರಿಗೆಲ್ಲ ನಮ್ಮ ಸರ್ವ ಕನ್ನಡಿಗರ ಪರವಾಗಿ ಮನಪೂರ್ವಕ ನಮನಗಳನ್ನು ಸಲ್ಲಿಸಲು ಬಯಸುತ್ತೇನೆ.
ಆದರೆಇವರಂತೆಬಂದಇನ್ನುಅನೇಕರಿಗೆನಾನುಈಗಾಗಲೇಮೇಲೆಹೇಳಿದಂತೆಕನ್ನಡಕಲಿಯುವುದುಬೇಕಿಲ್ಲ. ಹಾಗೆಯೇ ನಮ್ಮವರಿಗೂ ಇವರಿಗೆ ಕನ್ನಡ ಕಲಿಸುವ ಇರಾದೆಯೂ ಇಲ್ಲ.
ಇನ್ನು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಒಳಪಡುವ ಅನೇಕ ಆಡಳಿತಾತ್ಮಕ ಕಚೇರಿ ಕಂಪನಿಗಳ ಸಿಬ್ಬಂದಿಗಳ ನಡೆಯೇನು ಭಿನ್ನವಾಗಿಲ್ಲ. ಅವರ ಸೇವೆ ಪಡೆಯುವ ನಮ್ಮವರು ಕನ್ನಡ ಮಾತಾಡಿ ಅವರನ್ನುಇಕ್ಕಟ್ಟಿಗೆ ಸಿಲುಕಿಸುವ ಬದಲಿಗೆ, ಇವರೇ ಅವರ ಭಾಷೆ ಮಾತಾಡಲು ಹೋಗಿ ಇಕ್ಕಟಿಗೆ ಸಿಲುಕಿ ಬ್ಯಾಬ್ಯಾ ಎನ್ನುವಂತೆ ಮಾಡಿಕೊಳ್ಳುತ್ತಾರೆ.
ಉದಾ : ರಾಷ್ಟ್ರೀಕೃತ ಬ್ಯಾಂಕ್, ಎಲ್. ಐ. ಸಿಯಂತಹ ಸಂಸ್ಥೆಗಳಲ್ಲಿ ನಿತ್ಯವೂ ನಡೆಯುವ ಗೋಳು ಇದು. ಹೀಗೆ ಹೊರ ರಾಜ್ಯದಿಂದ ಬಂದ ವಲಸಿಗರಾಗಲಿ, ಕೇಂದ್ರ ಸರ್ಕಾರದ ಉದ್ಯಮ, ಕಚೇರಿ ಕಂಪನಿಗಳಲ್ಲಿ ಕೆಲಸ ಮಾಡುವ, ಹಾಗೆಯೇ ಇನ್ನಿತರ ಖಾಸಗಿ ವಲಯಗಳಲ್ಲಿ, ಅಥವಾ ಇನ್ನ್ಯಾವುದೇ ವ್ಯವಸ್ಥೆಗಳಲ್ಲಿ ದುಡಿಯುವ ಪರಭಾಷಿಗರು ಕಡ್ಡಾಯವಾಗಿ ಇಲ್ಲಿನ ಭಾಷೆಯನ್ನು ಕಲಿಯಬೇಕೆಂಬುದು ನಿಯಮ.
ಅದು ಬಿಟ್ಟುಅವರ ಭಾಷೆಯನ್ನು ಕನ್ನಡಿಗರ ಮೇಲೆ ಹೇರುವುದಲ್ಲ. ಪಾಪ ಇವರೇನು ಕಲೀತಾರೋ, ಆದರೆ ಬಹು ಭಾಷಾ ಪಂಡಿತರಾದ ನಾವು ಕನ್ನಡಿಗರು ಇವರಿಗೆ ಕನ್ನಡ ಕಲಿಯುವ ತೊಂದರೆ ಕೊಡುವುದಿಲ್ಲ.
ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿರುವ ಒಟ್ಟು ಜನಸಂಖ್ಯೆಯಲ್ಲಿ ಕೇವಲ ೩೦% ಜನ ಮಾತ್ರ ಕನ್ನಡ ಮಾತನಾಡುತ್ತಾರೆಂದರೆ ಇಷ್ಟರಲ್ಲೇ ನಾವು ಅರ್ಥ ಮಾಡಿ ಕೊಳ್ಳಬೇಕಿದೆ. ಇಂಗ್ಲಿಷ್ ಹಿಂದಿಯನ್ನಂತೂ ನಾವೇ ಮರೆಸುತ್ತಿದ್ದೇವೆ. ಅದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇಂಗ್ಲಿಷ್ ಬಿಡಿ ಅದರದ್ದು ಒಂದು ಲೆಕ್ಕ ಇಂಗ್ಲಿಷ್ ಇಲ್ಲದೇ ಬದುಕೇ ಇಲ್ಲ ಎನ್ನುವ ಭ್ರಮಾಲೋಕವನ್ನು ಸೃಷ್ಟಿಸಿ ಹಲವು ದಶಕಗಳೇ ಕಳೆದಿವೆ.
ಮತ್ತೆ ನಮ್ಮ ಕನ್ನಡಿಗರನ್ನು ಸೇರಿಕೊಂಡತೆ ಇನ್ನಿತರ ಪ್ರಾದೇಶಿಕ ಭಾಷಿಗರು ಹಿಂದಿಯನ್ನು ರಾಷ್ಟೀಯ ಭಾಷೆಯೆಂದು ತಪ್ಪು ತಿಳಿದುಕೊಂಡು ಅದನ್ನು ಗದ್ದುಗೆ ಮೇಲಿಟ್ಟು ಪೂಜಿಸುತ್ತಿದ್ದಾರೆ.
ಇದುವರೆಗೂ ನಮ್ಮ ಭಾರತದ ಯಾವುದೇ ಭಾಷೆಯನ್ನು ಅಧಿಕೃತವಾಗಿ ರಾಷ್ಟೀಯ ಭಾಷೆಯೆಂದು ಒಪ್ಪಿಕೊಂಡಿಲ್ಲವೆಂಬ ಸತ್ಯವನ್ನು ಇನ್ನು ನಮ್ಮ ಬಹುತೇಕ ಭಾರತೀಯರು ಅರಿತುಕೊಳ್ಳಬೇಕಿದೆ. ಮಕ್ಕಳಿಗೆ ಪಾಠ ಹೇಳುವ ಇನ್ನುಎಷ್ಟೋ ಜನ ಶಿಕ್ಷಕರೇ ಹಿಂದಿಯನ್ನು ರಾಷ್ಟೀಯ ಭಾಷೆಯೆಂದೇ ವಿದ್ಯಾರ್ಥಿಗಳ ತಲೆಗೆ ತುರುಕುತ್ತಿರುವುದು ದುರಂತದ ಸಂಗತಿ.
ಇದು ಇರಲಿ, ಇನ್ನು ನಮ್ಮ ಕನ್ನಡದ ನೆಲದಲ್ಲೇ ಹುಟ್ಟಿ ಬೆಳೆದು, ಈ ನಾಡಿನ ಭಾಗವಾದವರೇ ಕನ್ನಡವನ್ನು ಕಡೆಗಣಿಸುತ್ತಿರುವುದು ಬೇಸರದ ಸಂಗತಿ.
ಉದಾ: ಧರ್ಮಿಯ ಅಲ್ಪಸಂಖ್ಯಾತರನ್ನೇ ತೆಗೆದುಕೊಳ್ಳೋಣ ಅವರ ಮಾತೃ ಭಾಷೆ ಪ್ರಾದೇಶಿಕ ಭಾಷೆ ಬಿಟ್ಟು ಇನ್ನು ಯಾವುದೋ ಬೇರೆ ಇರುತ್ತದೆ, ಸರಿ ಇದನ್ನು ನಾವು ಒಪ್ಪಿಕೊಳ್ಳೋಣ.
ಅವರವರ ಮಾತೃ ಭಾಷೆಯ ಬಗ್ಗೆ ಅವರವರಿಗೆ ಭಕ್ತಿಭಾವ ಅಭಿಮಾನ ಇರುವುದು ಸಹಜ. ಅದನ್ನುನಾವು ಗೌರವಿಸಬೇಕು. ಆದರೆ ಇದು ಪ್ರಾದೇಶಿಕ ಭಾಷೆ ಅಥವಾ ನಾಡಭಾಷೆಯನ್ನು ಕಲಿಯದೇ ಕಡೆಗಣಿಸುವಷ್ಟು, ಅಥವಾ ಅಗತ್ಯವಿದ್ದಾಗಲೂ ಪ್ರಾದೇಶಿಕ ಭಾಷೆಯನ್ನು ಬಳಸದೆ ಇರುವಷ್ಟು ಅತಿರೇಕಕ್ಕೆ ಹೋಗಬಾರದಲ್ಲವೇ? ಯಾಕೆ ನಾನು ಇಲ್ಲಿ ಈ ಮಾತನ್ನು ಹೇಳುತ್ತಿದ್ದೇನೆಂದರೇ, ಕನ್ನಡಿಗರೇ ಆದ ನಮ್ಮ ಬಹುತೇಕ ಅಲ್ಪಸಂಖ್ಯಾತ ಬಂಧುಗಳು ಸ್ವಚ್ಛವಾಗಿ ಕನ್ನಡ ಮಾತಾಡುತ್ತಿಲ್ಲ. ಅವರ ಮಕ್ಕಳಿಗೂ ಕನ್ನಡ ಕಲಿಯಲು ಪೂರಕ ವಾತಾವರಣ ನಿರ್ಮಾಣ ಮಾಡುತ್ತಿಲ್ಲ. ನಾನು ಒಬ್ಬ ಕನ್ನಡ ಶಿಕ್ಷಕನಾಗಿ ನನನಗಾದ ವೈಯಕ್ತಿಕ ಅನುಭವವನ್ನೇ ನಾನಿಲ್ಲಿ ಹಂಚಿಕೊಳ್ಳಲು ಬಯಸುತ್ತೇನೆ. ಇತರೇ ಮಕ್ಕಳಿಗೆ ಕನ್ನಡ ಹೇಳಿ ಕೊಡವಷ್ಟು ಸುಲಭವಾಗಿ ಕೆಲವು ಅಲ್ಪಸಂಖ್ಯಾತ ಧರ್ಮಿಯ ಮಕ್ಕಳಿಗೆ ಕನ್ನಡ ಹೇಳಿ ಕೊಡುವುದು ಕಷ್ಟದ ಕೆಲಸ.
"ನನಗೆ ಕನ್ನಡ ಮಾತಾಡಲು ಓದಲು ಬರೆಯಲು ಬರಲ್ಲ ಸರ್" ಎಂದು ಹೇಳುವುದೇ ಅವರಿಗೊಂದು ಹೆಮ್ಮೆಯ ವಿಷಯವಾಗಿದೆ. ಪ್ರಾಥಮಿಕ ಶಿಕ್ಷಣ ದಾಟುತ್ತಿದ್ದಂತೆ ಭಾಷಾ ಆಯ್ಕೆಯ ಅವಕಾಶದಡಿ ಕನ್ನಡವನ್ನು ಬಿಟ್ಟು ಪರ ಭಾಷೆಯನ್ನು ಆಯ್ಕೆ ಮಾಡಿಕೊಂಡು ಆ ಭಾಷೆಯನ್ನು ಓದುತ್ತಾರೆ. ಅಗತ್ಯತೆ ಅನಿವಾರ್ಯತೆಯನ್ನು ಹೊರತು ಪಡಿಸಿಯೂ ಕನ್ನಡವನ್ನು ಬಿಟ್ಟು ಪರ ಭಾಷೆಯನ್ನು ಕನ್ನಡದ ಜಾಗದಲ್ಲಿ ಅಧ್ಯಯನ ಮಾಡಲು ಅವಕಾಶ ಮಾಡಿಕೊಟ್ಟ ನಮ್ಮ ಸರ್ಕಾರಗಳ ದೋಷಪೂರಿತ ಧೋರಣೆಗಳು ಸಹ ಇದಕ್ಕೆ ಕಾರಣವಾಗಿವೆಯೆಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.
ಕೇರಳ, ತಮಿಳುನಾಡಿನಂತಹ ರಾಜ್ಯಗಳಲ್ಲಿರುವ ಧರ್ಮೀಯ ಅಲ್ಪಸಂಖ್ಯಾತರಾಗಲಿ, ಭಾಷೀಯ ಅಲ್ಪಸಂಖ್ಯಾತರಾಗಲಿ ಅಲ್ಲಿನ ಭಾಷೆ ಮಲೆಯಾಳಂ, ತಮಿಳನ್ನು ಕಡ್ಡಾಯವಾಗಿಬಳಸಬೇಕು. ಕೇವಲ ಹೊರಗಡೆ ಅಷ್ಟೇ ಅಲ್ಲ ಅವರ ಮನೆಗಳಲ್ಲೂ ಸಹ. ಅವರು ಬಳುಸುತ್ತಾರೆ ಕೂಡ. ಅದು ಒತ್ತಾಯದಿಂದಲ್ಲ ಅಭಿಮಾನದಿಂದ.
ಇದು ನಮ್ಮ ಕನ್ನಡನಾಡಿನ ವಾಸಿಗಳಿಗೆ ಈ ಸೂಕ್ಷ್ಮತೆ ಅರ್ಥವಾಗುವುದಾದಾರೂ ಯಾವಾಗ? ಈನಾಡಿನ ನೆಲಜಲ ಎಲ್ಲರಿಗೂ ಬೇಕು ಆದರೆ ನಮ್ಮ ಕನ್ನಡ ಭಾಷೆ ಮಾತ್ರ ಯಾರಿಗೂ ಬೇಡ ಅಲ್ಲವೇ?.
ಲೇಖನ: ಶಫಿವುಲ್ಲಾ, ಚಿಂತಕರು, ಹಿರಿಯೂರು.




