ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು:
ನಾನು ಐಎಎಸ್ ಅಧಿಕಾರಿ ಔಷಧ ಸರಬರಾಜು ಮಾಡುವ ಗುತ್ತಿಗೆ ಕೊಡಿಸುತ್ತೇನೆಂದು ನಂಬಿಸಿ ಔಷಧ ಅಂಗಡಿ ಮಾಲೀಕನಿಗೆ 41 ಲಕ್ಷ ವಂಚಿಸಿರುವ ಪ್ರಕರಣ ಬಯಲಿಗೆ ಬಂದಿದೆ. ನಕಲಿ ಐಎಎಸ್ ಅಧಿಕಾರಿಯನ್ನು ಬೆಂಗಳೂರಿನ ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಕಡೂರು ತಾಲ್ಲೂಕಿನ ಚಿಕ್ಕಬಳ್ಳೇಕೆರೆ ಗ್ರಾಮದವನು ಎಂದು ಹೇಳಿಕೊಂಡಿದ್ದ ಮಿಥುನ್, ತಾನು 2023ನೇ ಬ್ಯಾಚ್‌ನ ಐಎಎಸ್ ಅಧಿಕಾರಿ ಎಂದು ಹೇಳಿಕೊಂಡಿದ್ದ.
'ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಕೆಲಸ ಮಾಡುತ್ತಿದ್ದೇನೆ, ಚಿಕ್ಕಮಗಳೂರು ಜಿಲ್ಲೆಯ ಆರೋಗ್ಯ ಇಲಾಖೆಯ ಉಸ್ತುವಾರಿ ಕೂಡ ಹೊಂದಿದ್ದೇನೆ' ಎಂದು ನಂಬಿಸಿದ್ದ. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಚಂದ್ರಶೇಖರ್ ಸೇರಿ ಎಲ್ಲರೂ ಇದನ್ನು ನಂಬಿದ್ದರು. ಔಷಧ ಅಂಗಡಿ ನಡೆಸುವ ಸತೀಶ್ ಜಿ.ಆರ್. ಎಂಬುವರು ಪೊಲೀಸರಿಗೆ ದೂರು ನೀಡಿದ ಬಳಿಕ ಆತ ನಕಲಿ ಅಧಿಕಾರಿ ಎಂದು ಸಾಭಿತಾಗಿದೆ.
'ಔಷಧ ಅಂಗಡಿಯ ಹಿಂಭಾಗದಲ್ಲಿರುವ ಶ್ರೇಯಸ್ ಕ್ಲಿನಿಕ್‌ಗೆ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಚಂದ್ರಶೇಖರ್ ಜತೆ ಆಗಾಗ ಮಿಥುನ್ ಬರುತ್ತಿದ್ದ. ಐಎಎಸ್ ಅಧಿಕಾರಿ ಎಂದು ಚಂದ್ರಶೇಖರ್ ಅವರೇ ಪರಿಚಯ ಮಾಡಿಸಿದ್ದರು. ಚಿಕ್ಕಮಗಳೂರು ಜಿಲ್ಲೆಯ ಇಡೀ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಔಷಧ ಸರಬರಾಜು ಮಾಡಲು ಆದೇಶ ಕೊಡಿಸುತ್ತಾರೆ ಎಂದು ಚಂದ್ರಶೇಖರ್ ಹೇಳಿದ್ದರು' ಎಂದು ಸತೀಶ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
'1.8 ಕೋಟಿ ಮೊತ್ತದ ಔಷಧ ಸರಬರಾಜು ಆದೇಶ ಕೊಡಿಸಲಾಗುವುದು, ಶೇ 20ರಷ್ಟು ಕಮಿಷನ್ ನೀಡಬೇಕು' ಎಂದು ಮಿಥುನ್ ಕೇಳಿದ್ದ. ಅದರಂತೆ ಚಂದ್ರಶೇಖರ್ ಸಮ್ಮುಖದಲ್ಲೇ ಬೆಂಗಳೂರಿನ ಜಕ್ಕೂರು ಏರೋಡ್ರಮ್ ಪಕ್ಕದ ರಸ್ತೆಯಲ್ಲಿ 2026ರ ಜ.18ರಂದು ಹಣ ನೀಡಿದ್ದೇನೆ' ಎಂದು ಅವರು ದೂರಿನಲ್ಲಿ ವಿವರಿಸಿದ್ದಾರೆ.
'ಎರಡು ವಾರಗಳಾದರೂ ಯಾವುದೇ ಆದೇಶ ಕೊಡಿಸದ ಕಾರಣ ಮತ್ತೆ ಸಂಪರ್ಕ ಮಾಡಿ ಕೇಳಿದಾಗ 5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ. ಅದನ್ನೂ ಮಿಥುನ್ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿದ್ದೇನೆ. ಇನ್ನೂ 2- 3 ತಿಂಗಳು ಕಾಲಾವಕಾಶ ಬೇಕಾಗುತ್ತದೆ ಎಂದು ಹೇಳಿದ್ದ. ಬಳಿಕ ಆರೋಗ್ಯ ಇಲಾಖೆಯಲ್ಲಿ ಇರುವ ಪರಿಚಯಸ್ಥರನ್ನು ವಿಚಾರಿಸಿದಾಗ ಮಿಥುನ್ ಹೆಸರಿನ ಐಎಎಸ್ ಅಧಿಕಾರಿ ಇಲ್ಲ ಎಂಬುದು ಗೊತ್ತಾಯಿತು. ನನಗೆ ವಂಚನೆ ಮಾಡಿರುವ ಮಿಥುನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು' ಎಂದು ಸತೀಶ್ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಗೋಷ್ಠಿ ನಡೆಸಿದ ನಗರದ ಲಿಸಾ ಫೌಂಡೇಷನ್ ಸಂಸ್ಥಾಪಕಿ ಸಂಗೀತಾ ಪ್ರಸಾದ್, 'ಈ ಪ್ರಕರಣದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಚಂದ್ರಶೇಖರ್ ಅವರ ಕೈವಾಡವೂ ಇದೆ. ಆದ್ದರಿಂದ ಅವರನ್ನೂ ಎ-2 ಆರೋಪಿಯನ್ನಾಗಿ ಮಾಡಬೇಕು' ಎಂದು ಒತ್ತಾಯಿಸಿದರು.


