ಚಂದ್ರವಳ್ಳಿ ನ್ಯೂಸ್, ಹಾಸನ:
ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ನೀಡುವ ಪ್ರಸಿದ್ಧ ಶಕ್ತಿದೇವತೆ ಹಾಸನಾಂಬೆಯ 14 ದಿನಗಳ ಜಾತ್ರಾ ಮಹೋತ್ಸವಕ್ಕೆ ವಿಧ್ಯುಕ್ತ ತೆರೆ ಬಿದ್ದಿದೆ. ಧಾರ್ಮಿಕ ವಿಧಿವಿಧಾನಗಳೊಂದಿಗೆ ಗರ್ಭಗುಡಿಯ ಬಾಗಿಲನ್ನು ಅರ್ಚಕರು ಇಂದು ಮುಚ್ಚಿದರು.
ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು, ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ಸಮ್ಮುಖದಲ್ಲಿ ಪ್ರಧಾನ ಅರ್ಚಕರು ದೇವಿಯ ಗರ್ಭಗುಡಿಗೆ ಬೀಗ ಹಾಕಿ ಮುದ್ರೆ ಒತ್ತಿದರು. ಬಾಗಿಲು ಮುಚ್ಚುವ ಮುನ್ನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ದೇವಿಯ ಅಂತಿಮ ದರ್ಶನ ಪಡೆದು ವಿಶೇಷ ಪೂಜೆ ನೆರವೇರಿಸಿದರು.
ಅಕ್ಟೋಬರ್ 29ರಿಂದ ಪ್ರಾರಂಭವಾಗಿದ್ದ ಶ್ರೀ ಹಾಸನಾಂಬ ದೇವಿ ಹಾಗೂ ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಲಕ್ಷಾಂತರ ಭಕ್ತರು ದರ್ಶನ ಪಡೆದರು. ಮುಂದಿನ ವರ್ಷದ ಜಾತ್ರಾ ಮಹೋತ್ಸವಕ್ಕಾಗಿ (2027ರ ಅಕ್ಟೋಬರ್ 21ರಿಂದ 31ರವರೆಗೆ) ಭಕ್ತರು ದೇವಿಯ ದರ್ಶನಕ್ಕೆ ಕಾಯಬೇಕಿದೆ.




