ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪರಿಶಿಷ್ಟ ಜಾತಿ ಮೀಸಲಾತಿಯನ್ನು ಶೇ. 15 ರಿಂದ 17ಕ್ಕೆ ಹಾಗೂ ಪರಿಶಿಷ್ಟ ಪಂಗಡ ಮೀಸಲಾತಿಯನ್ನು ಶೇ. 3 ರಿಂದ 7ಕ್ಕೆ ಹೆಚ್ಚಿಸಿದ್ದ ರಾಜ್ಯ ಸರ್ಕಾರದ ಆದೇಶವನ್ನು ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಅನುಮತಿ ಅರ್ಜಿ ಸಲ್ಲಿಸಿದೆ. 2026ರ ಅಕ್ಟೋಬರ್ 27ರ ಸರ್ಕಾರಿ ಆದೇಶದನ್ವಯ ಅಕ್ಟೋಬರ್ 28 ರಂದು ಮೇಲ್ಮನವಿ ಸಲ್ಲಿಸಲು ಮಂಜೂರಾತಿ ನೀಡಲಾಗಿತ್ತು.
ಸರ್ಕಾರ ಕೈಗೊಂಡಿರುವ ಪ್ರಮುಖ ಕ್ರಮಗಳು: ಬ್ಯಾಕ್‌ಲಾಗ್ ಹುದ್ದೆಗಳ ರಕ್ಷಣೆ: ಕೋರ್ಟ್ ತೀರ್ಪು ಬರುವವರೆಗೆ SC-ST ಅಭ್ಯರ್ಥಿಗಳಿಗೆ ಹೆಚ್ಚುವರಿ ಶೇ. 6ರಷ್ಟು ಹುದ್ದೆಗಳನ್ನು ನಷ್ಟವಾಗದಂತೆ ಬ್ಯಾಕ್‌ಲಾಗ್‌ನಲ್ಲಿ ಕಾಯ್ದಿರಿಸಲಾಗಿದೆ.
ಒಳಮೀಸಲಾತಿ ಹಾಗೂ ನೇಮಕಾತಿ: ಅತ್ಯಂತ ಹಿಂದುಳಿದ ಸಮುದಾಯಗಳಿಗೆ ತಲುಪಿಸಲು ಒಳಮೀಸಲಾತಿ ಜಾರಿಗೊಳಿಸಲಾಗಿದೆ. ಅಲ್ಲದೆ, 2026ರ ಫೆಬ್ರವರಿಯಲ್ಲಿ 56,432 ಹುದ್ದೆಗಳ ಭರ್ತಿಗೆ ಮಂಜೂರಾತಿ ನೀಡಿ ನೇಮಕಾತಿ ಪ್ರಕ್ರಿಯೆ ಮುಂದುವರಿಸಲಾಗಿದೆ.
ಒಂಬತ್ತನೇ ಅನುಸೂಚಿ ರಕ್ಷಣೆ: ಮೀಸಲಾತಿ ಹೆಚ್ಚಳಕ್ಕೆ ಸಂವಿಧಾನದ 9ನೇ ಅನುಸೂಚಿಯಲ್ಲಿ ರಕ್ಷಣೆ ಕೋರಿ 2025ರ ಡಿಸೆಂಬರ್ 18ರಂದು ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಿದ್ದು, ಸಂವಿಧಾನ ತಿದ್ದುಪಡಿಗಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಾಗುತ್ತಿದೆ.
ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಆರೋಪ: 2020 ರಲ್ಲಿ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ಆಯೋಗವು ಮೀಸಲಾತಿ ಹೆಚ್ಚಳವನ್ನು 9ನೇ ಅನುಸೂಚಿಯಲ್ಲಿ ಸೇರಿಸಿ ಕಾನೂನು ರಕ್ಷಣೆ ನೀಡುವಂತೆ ಸಲಹೆ ನೀಡಿತ್ತು. ಆದರೆ, ಹಿಂದಿನ ಬಿಜೆಪಿ ಸರ್ಕಾರ 9ನೇ ಅನುಸೂಚಿಗೆ ಸೇರಿಸದೆ ಚುನಾವಣೆಗೆ ಕೆಲವೇ ವಾರಗಳ ಮುನ್ನ ಸುಗ್ರೀವಾಜ್ಞೆ ಮೂಲಕ ಕಾಯ್ದೆ ತಂದಿತ್ತು. ರಾಷ್ಟ್ರೀಯ ಆಯೋಗಗಳೊಂದಿಗೆ ಕಡ್ಡಾಯ ಸಮಾಲೋಚನೆ ನಡೆಸದ ಕಾರಣ ಹೈಕೋರ್ಟ್‌ನಲ್ಲಿ ಹಿನ್ನಡೆಯಾಗಿದ್ದು, ಡಬಲ್ ಇಂಜಿನ್ ಸರ್ಕಾರಕ್ಕೆ ಸಂವಿಧಾನ ತಿದ್ದುಪಡಿ ಮಾಡುವ ಅವಕಾಶವಿದ್ದರೂ ಮಾಡಲಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.




