ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿಮಾ ಕಂಪನಿಗಳು ಸಾರ್ವಜನಿಕ ಹಣವನ್ನು ನಿರ್ವಹಿಸುತ್ತವೆ. ಮೋಸದ ಆಧಾರದ ಮೇಲೆ ಸಾರ್ವಜನಿಕ ಹಣವನ್ನು ಲೂಟಿ ಮಾಡಲು ಬಿಡಲಾಗುವುದಿಲ್ಲ ಎಂದು ತಿಳಿಸಿರುವ ಹೈಕೋರ್ಟ್, ರಸ್ತೆ ಅಪಘಾತ ಪ್ರಕರಣವೊಂದರಲ್ಲಿ ಪರಿಹಾರ ಪಡೆಯುವ ಉದ್ದೇಶದಿಂದ ತಪ್ಪಾಗಿ ವಾಹನವೊಂದನ್ನು ಸಿಲುಕಿಸಿ ನ್ಯಾಯಾಧಿಕರಣದಿಂದ ಪಡೆದುಕೊಂಡಿದ್ದ 5.70 ಲಕ್ಷ ರೂ. ಪರಿಹಾರದ ಆದೇಶವನ್ನು ರದ್ದುಗೊಳಿಸಿ ಆದೇಶಿಸಿದೆ.
ರಸ್ತೆ ಅಪಘಾತ ಪ್ರಕರಣದಲ್ಲಿ ಪರಿಹಾರ ಘೋಷಣೆ ಮಾಡಿದ್ದ ನ್ಯಾಯಾಧಿಕರಣದ ಆದೇಶ ಪ್ರಶ್ನಿಸಿ ನ್ಯಾಷನಲ್‌ಇನ್ಶೂರೆನ್ಸ್‌ಕಂಪನಿ ಮತ್ತು ಪರಿಹಾರ ಹೆಚ್ಚಳ ಮಾಡುವಂತೆ ಕೋರಿ ಮೃತರ ಸಂಬಂಧಿಕರು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಬಿ.ಗೀತಾ ಅವರಿದ್ದ ಧಾರವಾಡದ ನ್ಯಾಯಪೀಠ ಈ ಆದೇಶ ನೀಡಿದೆ.
ವಿಮಾ ಕಂಪನಿಗಳು ಸಾರ್ವಜನಿಕ ಹಣವನ್ನು ನಿರ್ವಹಿಸುತ್ತವೆ. ಮೋಸದ ಆಧಾರದ ಮೇಲೆ ಸಾರ್ವಜನಿಕ ಹಣವನ್ನು ಲೂಟಿ ಮಾಡಲು ಅವಕಾಶವಿಲ್ಲ. ಈ ಪ್ರಕರಣದಲ್ಲಿ ಅಪಘಾತಕ್ಕೆ ಪ್ರಸ್ತಾವಿತ ಟೆಂಪೋ ಡಿಕ್ಕಿ ಹೊಡೆದಿದೆ ಎಂಬುದಕ್ಕೆ ಸಂಬಂಧಿಸಿದಂತೆ ದೂರಿನಲ್ಲಿ ಉಲ್ಲೇಖವಿಲ್ಲ. ಹಿಂಬದಿ ಸವಾರನ ಹೇಳಿಕೆಯಂತೆ ಮೃತ ಚಾಲಕನೇ ಅತಿವೇಗವಾಗಿ ಹೋಗಿ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾರೆ ಎಂಬುದಾಗಿ ಹೇಳಿದ್ದಾರೆ. ಆದರೆ, ಅಪಘಾತ ನಡೆದು ಸುಮಾರು ಒಂದು ತಿಂಗಳ ನಂತರ ಹಠಾತ್ ಟೆಂಪೋ ಟ್ರ್ಯಾಕ್ಸ್ ವಾಹನವನ್ನು ಪ್ರಕರಣದಲ್ಲಿ ಸೇರಿಸಲಾಗಿದೆ. ಪ್ರಕರಣದ ಪ್ರತ್ಯಕ್ಷ್ಯ ಸಾಕ್ಷಿ ಕ್ರಿಮಿನಲ್ ನ್ಯಾಯಾಲಯದಲ್ಲಿ 'ನನಗೆ ಅಪಘಾತದ ಬಗ್ಗೆ ಗೊತ್ತಿಲ್ಲ' ಎಂಬುದಾಗಿ ಹೇಳಿಕೆ ನೀಡಿದ್ದಾರೆ. ಆದರೆ, ಪರಿಹಾರ ಮಂಡಳಿಯ ಮುಂದೆ ಬಂದು ಟೆಂಪೋ ಟ್ರ್ಯಾಕ್ಸ್ ಡಿಕ್ಕಿಯಾಗಿದೆ ಎಂದು ಸುಳ್ಳು ಸಾಕ್ಷಿ ನುಡಿದಿರುವುದು ಪಾಟಿ ಸವಾಲಿನಲ್ಲಿ ಸಾಬೀತಾಗಿದೆ ಎಂದಿರುವ ಹೈಕೋರ್ಟ್, ವಿಮಾ ಕಂಪನಿ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿ, ನ್ಯಾಯಮಂಡಳಿಯ ಪರಿಹಾರದ ಆದೇಶವನ್ನು ರದ್ದುಗೊಳಿಸಿದೆ. ಇದೇ ವೇಳೆ ಹೆಚ್ಚಿನ ಪರಿಹಾರ ಕೋರಿ ಅರ್ಜಿದಾರರು ಸಲ್ಲಿಸಿದ್ದ ಅರ್ಜಿಯನ್ನೂ ವಜಾಗೊಳಿಸಿದೆ.
ಪ್ರಕರಣದ ಹಿನ್ನೆಲೆ: 2003ರ ಮೇ 11ರಂದು ಕೊರಟಗೆರೆ - ಬೆಂಗಳೂರು ರಸ್ತೆಯ ಶನಿ ದೇವರ ದೇವಸ್ಥಾನದ ಬಳಿ ಮೃತ ಅಜರ್‌ಎಂಬವರು ಸ್ನೇಹಿತನೊಂದಿಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಹಿಂದಿನಿಂದ ಬಂದ ಟೆಂಪೋ ಡಿಕ್ಕಿ ಹೊಡೆದಿತ್ತು. ಪರಿಣಾಮ ಅಜರ್‌ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯ ಮೃತಪಟ್ಟಿದ್ದರು. ಈ ಸಂಬಂಧ ಮೃತನ ಪೋಷಕರು, ಹಾವೇರಿ ಮೂಲದ ಹನುಮಂತಗೌಡ ಪಾಟೀಲ್ ಅವರಿಗೆ ಸೇರಿದ ಟೆಂಪೋ ಟ್ರ್ಯಾಕ್ಸ್ ಡಿಕ್ಕಿ ಹೊಡೆದಿದ್ದರಿಂದಲೇ ಸಾವು ಸಂಭವಿಸಿದೆ ಎಂದು ಆರೋಪಿಸಿ ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ವಿರುದ್ಧ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದರು. ಆರಂಭದಲ್ಲಿ ವಿಚಾರಣೆ ನಡೆಸಿದ್ದ ನ್ಯಾಯಮಂಡಳಿ, ಘಟನೆಗೆ ಟೆಂಪೋ ಕಾರಣವಾಗಿದೆ ಎಂಬುದಕ್ಕೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಎಂದು ತಿಳಿಸಿ ಅರ್ಜಿಯನ್ನು ವಜಾಗೊಳಿಸಿತ್ತು.
ಈ ಆದೇಶವನ್ನು ಪ್ರಶ್ನಿಸಿ ಮೃತರ ಸಂಬಂಧಿಕರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ನ್ಯಾಯಮಂಡಳಿಯ ಆದೇಶ ಎತ್ತಿಹಿಡಿದು ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಧಿಕರಣ, ಅರ್ಜಿಯನ್ನು ಮತ್ತೆ ನ್ಯಾಯಮಂಡಳಿಗೆ ಹಿಂದಿರುಗಿಸಿ ಮರುಪರಿಶೀಲನೆ ನಡೆಸುವಂತೆ ಸೂಚನೆ ನೀಡಿತ್ತು.
ಪ್ರಕರಣ ಸಂಬಂಧ ಮತ್ತೆ ವಿಚಾರಣೆ ನಡೆಸಿದ್ದ ಹುಬ್ಬಳ್ಳಿ ಮೋಟಾರು ಅಪಘಾತ ಪರಿಹಾರಗಳ ನ್ಯಾಯಮಂಡಳಿ, ವಾದ ಆಲಿಸಿ 5,70,000 ರೂ. ಪರಿಹಾರ ನೀಡುವಂತೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ವಿಮಾ ಕಂಪನಿ ಹಾಗೂ ಪರಿಹಾತ ಹೆಚ್ಚಳ ಮಾಡುವಂತೆ ಕೋರಿ ಮೃತರ ಸಂಬಂಧಿಕರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.



