ಚಂದ್ರವಳ್ಳಿ ಯೂಸ್, ಹರಿಯಬ್ಬೆ:
ದಾಳಿಂಬೆ ಬೆಳೆಯಲ್ಲಿ ಕಂಡುಬರುವ ಪ್ರಮುಖ ರೋಗಗಳ ಸಮಗ್ರ ನಿರ್ವಹಣೆಗೆ ಜೈವಿಕ ಶಿಲೀಂಧ್ರನಾಶಕಗಳ ಬಳಕೆ ಅತ್ಯಂತ ಅಗತ್ಯ ಎಂದು ರೋಗಶಾಸ್ತ್ರ ತಜ್ಞರಾದ ಡಾ. ಗುರುದೇವಿ ವಿ. ನವಲಿ ಅಭಿಪ್ರಾಯಪಟ್ಟರು.
ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ (ಇರುವಕ್ಕಿ) ಹಾಗೂ ಹಿರಿಯೂರಿನ ತೋಟಗಾರಿಕೆ ಮಹಾವಿದ್ಯಾಲಯದ ಗ್ರಾಮೀಣ ತೋಟಗಾರಿಕೆ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ, ಧರ್ಮಪುರ ಸಮೀಪದ ಹರಿಯಬ್ಬೆ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ "ದಾಳಿಂಬೆ ಬೆಳೆಯ ರೋಗ ನಿರ್ವಹಣೆ" ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೋಗ ಲಕ್ಷಣಗಳು ಹಾಗೂ ವೈಜ್ಞಾನಿಕ ನಿರ್ವಹಣೆ:
ದಾಳಿಂಬೆ ಬೆಳೆಯನ್ನು ಕಾಡುವ ಪ್ರಮುಖ ರೋಗಗಳಾದ ಅಂಗಮಾರಿ (ಬ್ಯಾಕ್ಟೀರಿಯಲ್ ಬ್ಲೈಟ್), ಸೊರಗು ರೋಗ (ವಿಲ್ಟ್) ಹಾಗೂ ಆಂಥ್ರಾಕ್ನೋಸ್ ರೋಗಗಳ ಮುನ್ನೆಚ್ಚರಿಕೆ ಮತ್ತು ನಿಯಂತ್ರಣ ಕ್ರಮಗಳ ಕುರಿತು ಡಾ. ಗುರುದೇವಿ ಅವರು ರೈತರಿಗೆ ವಿಸ್ತೃತ ಮಾಹಿತಿ ನೀಡಿದರು. "ರೋಗ ಹರಡುವಿಕೆಯನ್ನು ತಡೆಯಲು ಟ್ರೈಕೋಡರ್ಮಾ, ಸ್ಯೂಡೋಮೊನಾಸ್ ಹಾಗೂ ಜೈವಿಕ ಗೊಬ್ಬರಗಳನ್ನು ವೈಜ್ಞಾನಿಕವಾಗಿ ಸೂಕ್ತ ಪ್ರಮಾಣದಲ್ಲಿ ಬಳಸಬೇಕು. ಅಗತ್ಯಕ್ಕೆ ತಕ್ಕಂತೆ ಮಾತ್ರ ರಾಸಾಯನಿಕಗಳ ಬಳಕೆ ಮಾಡುವುದು ಸೂಕ್ತ" ಎಂದು ಅವರು ಮಾರ್ಗದರ್ಶನ ನೀಡಿದರು.
ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಅರ್ಥಶಾಸ್ತ್ರ ತಜ್ಞರಾದ ಐಶ್ವರ್ಯಾ ಅವರು, ಕೃಷಿ ವೆಚ್ಚ ತಗ್ಗಿಸುವಿಕೆ ಮತ್ತು ಕೃಷಿ ಆರ್ಥಿಕ ನಿರ್ವಹಣೆ ಕುರಿತು ರೈತರಿಗೆ ಉಪಯುಕ್ತ ಮಾಹಿತಿ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಗ್ರಾಮೀಣ ತೋಟಗಾರಿಕೆ ಕಾರ್ಯಾನುಭವ ಕಾರ್ಯಕ್ರಮದ ವಿದ್ಯಾರ್ಥಿಗಳಾದ ಮಹಲಿಂಗಪ್ಪ. ಡಿ.ಎಲ್, ಅಭಿಷೇಕ್. ಬಿ.ಎಸ್, ಶರಣ್. ಎಂ.ಎಸ್, ಶರತ್. ಎಂ, ಮರಿಯಪ್ಪ ಎಚ್. ಆದಿನ್, ತಿರುಮಲ ರೆಡ್ಡಿ ಎಸ್.ಎನ್, ಹಾಗೂ ಸಿದ್ದು. ಎಸ್ ಸೇರಿದಂತೆ ಹರಿಯಬ್ಬೆ ಗ್ರಾಮದ ಹಲವಾರು ರೈತ ಬಾಂಧವರು ಸಕ್ರಿಯವಾಗಿ ಭಾಗವಹಿಸಿದ್ದರು.




