
ಏ.3 ರಂದು ಬಯಲು ಸೀಮೆಯ ಪ್ರಸಿದ್ಧ ವದ್ದೀಕೆರೆ ಸಿದ್ದಪ್ಪನ ಬ್ರಹ್ಮ ರಥೋತ್ಸವ…
ವರದಿ-ಮಲ್ಲಪ್ಪನಹಳ್ಳಿ ಎಂ.ಎಲ್.ಗಿರಿಧರ
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಮಧ್ಯ ಕರ್ನಾಟಕದ ಬಯಲು ಸೀಮೆಯ ಪ್ರಸಿದ್ಧ ವದ್ದೀಕೆರೆ ಶ್ರೀಸಿದ್ದೇಶ್ವರಸ್ವಾಮಿ ಯಾನೆ ಕಾಲಭೈರವೇಶ್ವರ ಸ್ವಾಮಿಯ ದೇವಸ್ಥಾನ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಐಮಂಗಲ ಹೋಬಳಿಯ ವದ್ದೀಕೆರೆ ಗ್ರಾಮದಲ್ಲಿದೆ.
ವದ್ದೀಕೆರೆ ಕಾಲಭೈರವೇಶ್ವರ ಯಾನೆ ಸಿದ್ದೇಶ್ವರ ಸ್ವಾಮಿ ದೇವಸ್ಥಾನವನ್ನು ೭ನೇ ಶತಮಾನದಲ್ಲಿ ನೊಳಂಬ ರಾಜರ ಆಳ್ವಿಕೆ ಕಾಲದಲ್ಲಿ ಶ್ರೀಹೆಂಜೇರು ಸಂಸ್ಥಾನವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ರಾಜ್ಯಬಾರ ಮಾಡುತ್ತಿದ್ದ ಕಾಲದಲ್ಲಿ ವದ್ದೀಕೆರೆ ಸಿದ್ದೇಶ್ವರಸ್ವಾಮಿ ದೇವಸ್ಥಾನವನ್ನು ಜೋಳ ಶೈಲಿಯಲ್ಲಿ ನಿರ್ಮಿಸಲಾಗಿದೆ ಎಂದು ಇತಿಹಾಸ ಹೊಂದಿದೆ.
ಜಿಲ್ಲೆಯ ವದ್ದೀಕೆರೆ ಸಿದ್ದೇಶ್ವರ, ಸೊಂಡೇಕೊಳ ಮತ್ತು ಪಗಲಬಂಡೆ ಗ್ರಾಮ ಸೇರಿದಂತೆ ಒಟ್ಟು ಮೂರು ಗ್ರಾಮಗಳಲ್ಲಿ ಮುತ್ತಿನ ವ್ಯಾಪಾರಿ ವೈಶ್ಯ ಜಾತಿಗೆ ಸೇರಿದ ದಾನಿ ಈ ದೇವಸ್ಥಾನ ನಿರ್ಮಾಣ ಮಾಡಿದ್ದಾರೆಂದು ಜನಪರ ಬಾಯಿಂದ ಬಾಯಿಯಲ್ಲಿ ನಲಿದಾಡಿಕೊಂಡು ಬಂದಿದೆ.
ಪೂಜೆ ಸಲ್ಲಿಕೆ-ಉಗ್ರ ಸ್ವರೂಪಿಯಾದ ಶ್ರೀಕಾಲಭೈರವೇಶ್ವರ ಸ್ವಾಮಿ ಅತ್ಯಂತ ಶಕ್ತಿ ದೇವರು. ಪ್ರತಿ ಭಾನುವಾರ ವಿಶೇಷ ಪೂಜೆ ನಡೆಯಲಿದೆ.
ಆರಂಭದಲ್ಲಿ ಕಾಡು ಗೊಲ್ಲ ಜನಾಂಗದವರು ಪೂಜೆ ಮಾಡುತ್ತಿದ್ದು ತವರು ಮನೆಯ ಉಡುಗೊರೆಯಾಗಿ ನಂತರದ ದಿನಗಳಲ್ಲಿ ಸಹೋದರ ಜಾತಿಯಾದ ಸಲಬೊಮ್ಮನಹಳ್ಳಿಯ ಕುಂಚಿಟಿಗ ಜಾತಿಗೆ ಪೂಜಾ ಕಾರ್ಯ ಮಾಡಲು ಉಂಬಳಿ ನೀಡಲಾಗಿದೆ.
1974ರಲ್ಲಿ ಮುಜರಾಯಿ ಇಲಾಖೆ ಸೇರಿದ್ದರಿಂದ ಅಂದಿನಿಂದ ಬ್ರಾಹ್ಮಣ ಜಾತಿಯವರು ನಿತ್ಯ ಪೂಜೆ, ಪುನಸ್ಕಾರ ಮಾಡುತ್ತಿದ್ದಾರೆ.
ಬ್ರಹ್ಮ ರಥೋತ್ಸವ-
ಐಸಿಹಾಸಿಕ ಪ್ರಸಿದ್ಧ ಶ್ರೀಸಿದ್ದೇಶ್ವರಸ್ವಾಮಿ ಜಾತ್ರೆ ಪ್ರತಿ ವರ್ಷ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ನಡೆಯಲಿದೆ. ಜಾತ್ರೆ ಸಂದರ್ಭದಲ್ಲಿ ಸೇರಿದಂತೆ ವಾರದ ಪೂಜೆಗೆ ಜಿಲ್ಲೆ, ರಾಜ್ಯದ ನಾನಾ ಜಿಲ್ಲೆಗಳು ಸೇರಿದಂತೆ ಪಕ್ಕದ ಆಂದ್ರ ಮತ್ತಿತರ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದಾರೆ. ಬುಡಕಟ್ಟು ಸಂಸ್ಕೃತಿಯ ಹಿನ್ನೆಲೆಯೊಂದಿ ಬ್ರಹ್ಮ ರಥೋತ್ಸವ ನಡೆಯಲಿದೆ.
ಮಜ್ಜನ ಬಾವಿ-
ಸಿದ್ದೇಶ್ವರಸ್ವಾಮಿ ದೇವಸ್ಥಾನದ ಸಮೀಪ ಮಜ್ಜನ ಬಾವಿ ಇದ್ದು ಬ್ರಹ್ಮ ರಥೋತ್ಸವದ ದಿನ ಸಂಪೂರ್ಣ ಭರ್ತಿಯಾಗಿರುತ್ತದೆ. ರಥೋತ್ಸವದ ಮರು ದಿನ ಮಜ್ಜನ ಬಾವಿಗೆ ಗರ್ಭದ ಕುರಿ ಬಲಿ ನೀಡಿ ಸಿದ್ಭುಕ್ತಿ ಮಾಡಿದ ನಂತರ ಮಜ್ಜನ ಬಾವಿ ಸಂಪೂರ್ಣ ಖಾಲಿಯಾಗಲಿದೆ. ಇದೊಂದು ಬಹುದೊಡ್ಡ ಪವಾಡವಾಗಿದ್ದು ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆದು ಹೋಗಲಿದೆ. ಕಂಕಣ ವಿಸರ್ಜನೆ ದಿನದ ನಂತರ ಮತ್ತೆ ಮಜ್ಜನ ಬಾವಿಗೆ ನೀರು ಹರಿದು ಬರಲಿದೆ. ಈ ಬಾವಿಯ ನೀರನ್ನು ಮೈಮೇಲೆ ಹಾಕಿಕೊಂಡರೆ ಆರೋಗ್ಯ ಭಾಗ್ಯ ದೊರೆಯಲಿದೆ ಎಂಬ ಪ್ರತೀತಿ ಇದ್ದು ದೇವಸ್ಥಾನ ಮತ್ತು ರಥೋತ್ಸವಕ್ಕೆ ಬರುವ ಭಕ್ತರು ಮೊದಲು ಮಜ್ಜನ ಬಾವಿ ಕಡೆ ಓಡಿ ಮೈಮೇಲೆ ನೀರು ಹಾಕಿಕೊಳ್ಳಲಿದ್ದಾರೆ.
ರಥೋತ್ಸವ-
ದೇವರ ಅಡ್ಡ ಪಲ್ಲಕ್ಕಿ ಹೂವಿನ ರಥೋತ್ಸವ ಮಧ್ಯಾಹ್ನದ ವೇಳೆಗೆ ನಡೆಯಲಿದೆ. ವದ್ದೀಕೆರೆ ಗ್ರಾಮಕ್ಕೆ ಸೇರಿದ ಭಕ್ತ ಸಾಗರ ಮಜ್ಜನ ಬಾವಿಯಿಂದ ನೀರನ್ನು ತಂದು ಪೂಜೆ ಸಲ್ಲಿಸಿದ ರಥೋತ್ಸವ ನಡೆಯಲಿದೆ. ರಥೋತ್ಸವಕ್ಕೆ ಬಾಳೆ ಹಣ್ಣು, ಮಂಡಕ್ಕಿ ಎಸೆಯುವ ಮೂಲಕ ಭಕ್ತಿ ಸಮರ್ಪಣೆ ಮಾಡಲಿದ್ದಾರೆ. ಮಜ್ಜಿನ ಬಾವಿಯಲ್ಲಿ ದಾಸಪ್ಪಗಳಿಂದ ಭಕ್ತರು ನೀರು ಹಾಕಿಸಿಕೊಳ್ಳುವ ದೃಶ್ಯ ಸಾಮಾನ್ಯವಾಗಿರುತ್ತದೆ. ಮಜ್ಜನ ಬಾವಿಯಿಂದ ನೀರನ್ನು ಹಾಕಿಸಿಕೊಂಡು ಬಂದ ಭಕ್ತರು ದೇವರ ಗುಡಿಯ ಪ್ರದಕ್ಷಣೆ ಹಾಕಿ ದರ್ಶನ ಪಡೆದು ಭಕ್ತಿ ಸಮರ್ಪಿಸಲಿದ್ದಾರೆ.
ಮಜ್ಜನ ಬಾವಿ ಮಹಾತ್ಮೆ-
ಕರ್ನಾಟಕ ಗಡಿ ಭಾಗದಕ್ಕೆ ಹೊಂದಿಕೊಂಡಿರುವ ಆಂದ್ರ ಪ್ರದೇಶದ ಹೇಮಾವತಿಯಲ್ಲಿ ನೆಲೆಸಿರುವ ಶ್ರೀಹೆಂಜಾರು ಸಿದ್ದೇಶ್ವರಸ್ವಾಮಿ ಮತ್ತು ವದ್ದೀಕೆರೆ ಸಿದ್ದೇಶ್ವರಸ್ವಾಮಿ ಇಬ್ಬರು ಸಹೋದರರಾಗಿರುತ್ತಾರೆ. ೭ನೇ ಶತಮಾನದ ನೊಳಂಬ ರಾಜರ ಕಾಲದಲ್ಲಿ ವದ್ದೀಕೆರೆ ಸಮೀಪ ನೊಣಬಿ ಪಟ್ಟಣವನ್ನು ಮಲ್ಲೇಗೌಡನೆಂಬ ಅರಸ ಆಳ್ವಿಕೆ ಮಾಡುತ್ತಿರುತ್ತಾನೆ. ಈತನಿಗೆ ಮಕ್ಕಳಿಲ್ಲದ ಕಾರಣ ಹೇಮಾವತಿಯಲ್ಲಿ ನೆಲೆಸಿದ್ದ ಸಿದ್ದೇಶ್ವರರಿಬ್ಬರನ್ನು ಕೇಳಿಕೊಂಡಾಗ ೭ ಜನ ಪುತ್ರಿಯರು ಮಲ್ಲೇಗೌಡನಿಗೆ ಜನಿಸುತ್ತಾರೆ. ಆಗ ಮಲ್ಲೇಗೌಡನಿಗೆ ಜನಿಸಿದ ೭ ಹೆಣ್ಣು ಮಕ್ಕಳಲ್ಲಿ ಪರದೇಶಿ ನಿಂಗಣ್ಣನಿಗೆ ಒಬ್ಬಳನ್ನು ಕೊಟ್ಟು ವಿವಾಹ ಮಾಡುವುದಾಗಿ ಸಿದ್ದೇಶ್ವರರಿಬ್ಬರಿಗೂ ಮಲ್ಲೇಗೌಡ ಮಾತು ಕೊಡುತ್ತಾನೆ. ಮದುವೆಗೆ ಬಂದಾಗ ಪರದೇಶಿ ನಿಂಗಣ್ಣನಿಗೆ ಹೆಣ್ಣು ಮಕ್ಕಳನ್ನು ನೀಡಲು ಮನಸ್ಸಿಲ್ಲದೆ ೬ ಜನ ಹೆಣ್ಣು ಮಕ್ಕಳನ್ನು ಬೇರೆಯವರಿಗೆ ಧಾರೆ ಎರೆದು ಕೊಡುತ್ತಾನೆ. ಕೊನೆಯವಳಾದ ಸ್ವರ್ಣಗೌರಿಗೂ ಬೇರೆಯವರೊಂದಿಗೆ ಮದುವೆ ನಿಶ್ಚಯವಾದಾಗ ಪರದೇಶಿ ನಿಂಗಣ್ಣನ ಹತ್ತಿರ ಬಂದ ಸ್ವರ್ಣಗೌರಿ, ನಮ್ಮಪ್ಪ ನಿನಗೆ ಮದುವೆ ಮಾಡಿಕೊಡಲು ಒಪ್ಪುತ್ತಿಲ್ಲ ಓಡಿ ಹೋಗಿ ಮದುವೆ ಆಗೋಣ ಬಾ ಎಂದು ಕೋರುತ್ತಾಳೆ. ಆದರೆ ಅದಕ್ಕೆ ಒಪ್ಪದ ಪರದೇಶಿ ನಿಂಗಣ್ಣ ಹೇಮಾವತಿಯ ಸಿದ್ದೇಶ್ವರರಿಬ್ಬರಲ್ಲಿ ದೂರು ಹೇಳುತ್ತಾನೆ. ಆಗ ಅತಿ ಕೋಪಿಷ್ಠನಾದ ವದ್ದೀಕೆರೆ ಸಿದ್ದೇಶ್ವರನನ್ನು ಹೇಮಾವತಿಯ ದೊಡ್ಡಣ್ಣನ ಗುಹೆಯಲ್ಲಿ ಕೂಡಿ ಹಾಕಿದಾಗ ರಾತ್ರೋ ರಾತಿ ಅಂಕಣವನ್ನು ಹಾರಿ ಹೊಡೆದು ಕೊಂಡು ಪರದೇಶಿ ನಿಂಗಣ್ಣನಿಗೆ ನ್ಯಾಯ ದೊರಕಿಸಿಕೊಡಲು ಬರುತ್ತಿರುವಾಗ ಹಿಂದೆಕ್ಕೆ ನೋಡದಂತೆ ಮುಂದೆ ಸಾಗು ಎಂದು ಮೊದಲೆ ಪರದೇಶಿ ನಿಂಗಣ್ಣನಿಗೆ ಸೂಚನೆ ನೀಡಿರುತ್ತಾನೆ. ಆದರೆ ವದ್ದೀಕೆರೆ ಸಮೀಪ ಬಂದಾಗ ನಿಂಗಣ್ಣ ಹಿಂದಕ್ಕೆ ತಿರುಗಿ ನೋಡಿದಾಗ ಸಿದ್ದೇಶ್ವರ ರೌದ್ರ ರೂಪ ಕಂಡು ಜ್ಞಾನ ತಪ್ಪಿ ಬಿದ್ದಾಗ ತನ್ನ ತ್ರಿಶೂಲದಿಂದ ಮಜ್ಜನ ಬಾವಿಯನ್ನು ತೋಡಿ ಅದರಲ್ಲಿನ ನೀರನ್ನು ಹಾಕಿ ನಿಂಗಣ್ಣನನ್ನು ಎಚ್ಚರಗೊಳಿಸುತ್ತಾನೆ. ನಂತರ ಪರದೇಶಿ ನಿಂಗಣ್ಣನಿಗೆ ಸ್ವರ್ಣಗೌರಿಯನ್ನು ಸಾಕ್ಷಿ ಮರದ ಮುಂದೆ ಮದುವೆ ಮಾಡಿಕೊಟ್ಟು ಅಲ್ಲಿ ನೆಲೆಸುತ್ತಾನೆ. ಅಲ್ಲದೆ ವದ್ದೀಕೆರೆ ಸಿದ್ದಪ್ಪನ ರೌದ್ರಾವತಾರಕ್ಕೆ ನೊಣಬಿ ಪಟ್ಟಣ ಸಂಪೂರ್ಣ ಹಾಳಾಗಿ ಹೋಗುತ್ತದೆ ಎಂದು ಪ್ರತಾಪ ಜೋಗಿ ಅವರ ದೇವರ ಚರಿತ್ರೆ ಬಗ್ಗೆ ಮಾಹಿತಿ ನೀಡಿದ್ದಾರೆ. ಹೇಮಾವತಿಯ ಹೆಂಜಾರು ಸಿದ್ದೇಶ್ವರಸ್ವಾಮಿ ಹೇಮಾವತಿಯಿಂದ ಪಶ್ಚಿಮ ಭಾಗಕ್ಕೆ ಇರುವ ವದ್ದೀಕೆರೆ ನೋಡುತ್ತಿದ್ದರೆ, ಇತ್ತ ವದ್ದೀಕೆರೆಯ ಸಿದ್ದೇಶ್ವರಸ್ವಾಮಿ ಪರದೇಶಿ ನಿಂಗಣ್ಣ ಮತ್ತು ಆತನ ಪತ್ನಿ ಸ್ಪರ್ಣಗೌರಿ ನಡೆದು ಹೋದ ದಾರಿ ದಕ್ಷಿಣಾಭಿಮುಖವಾಗಿ ನೋಡುತ್ತಿದ್ದರೆ, ಅತ್ತ ಪರದೇಶಿ ನಿಂಗಣ್ಣ, ಪತ್ನಿ ಸ್ವರ್ಣಗೌರಿ ವದ್ದೀಕೆರೆಯತ್ತ ಮುಖ ಮಾಡಿ ನೋಡುತ್ತಿರುವ ದೃಶ್ಯ ಇಂದಿಗೂ ಕಾಣಬಹುದಾಗಿದೆ.
ಮಾರ್ಗ-
ಜಿಲ್ಲಾ ಕೇಂದ್ರ ಚಿತ್ರದುರ್ಗದಿಂದ ೨೯ ಕಿ.ಮೀ, ಐಮಂಗಲದಿಂದ ೭ ಕಿ.ಮೀ ಮತ್ತು ಹಿರಿಯೂರಿನಿಂದ ೧೮ ಕಿಲೋ ಮೀಟರ್ ದೂರದಲ್ಲಿ ವದ್ದೀಕೆರೆ ಸಿದ್ದೇಶ್ವರ ದೇವಸ್ಥಾನವಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕು ಐಮಂಗಲ ಹೋಬಳಿಯ ವದ್ದೀಕೆರೆ ಗ್ರಾಮದ ಸಿದ್ದೇಶ್ವರ (ಸಿದ್ದಪ್ಪ) ಯಾನೆ ಕಾಲಭೈರವೇಶ್ವರಸ್ವಾಮಿ ದೇವಾಲಯದ ಪರಿಚಯ-ವದ್ದೀಕೆರೆ ಗ್ರಾಮವು ಮದಕರಿನಾಯಕನಕೋಟೆ (ಎಂ.ಡಿ.ಕೋಟೆ ) ಪಂಚಾಯಿತಿ ವ್ಯಾಪ್ತಿಯಲ್ಲಿದ್ದು, ಈ ಗ್ರಾಮವು ಚಿತ್ರದುರ್ಗ- ಐಮಂಗಲ – ವದ್ದೀಕೆರೆ-ಯರಬಳ್ಳಿ ಮುಖ್ಯರಸ್ತೆಯಲ್ಲಿದ್ದು, ಚಿತ್ರದುರ್ಗದಿಂದ 29 ಕಿಲೋಮೀಟರ್ ಹಾಗೂ ಹಿರಿಯೂರಿನಿಂದ 22 ಕಿಲೋಮೀಟರ್ ದೂರದಲ್ಲಿದೆ. ಇದು ತಾಲ್ಲೂಕು/ ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದೆನಿಸಿದೆ.