i
5 ಗ್ಯಾರೆಂಟಿಗಳಿಗೆ ಸಂಪುಟ ತಾತ್ವಿಕ ಒಪ್ಪಿಗೆ, ಅನಗತ್ಯ ವೆಚ್ಚಕ್ಕೆ ಕಡಿವಾಣ:ಸಿಎಂ ಸಿದ್ದರಾಮಯ್ಯ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚುನಾವಣಾ ಪೂರ್ವದಲ್ಲಿ ಪಕ್ಷದ ಪ್ರಣಾಳಿಕೆಯಲ್ಲಿ ರಾಜ್ಯದ ಜನತೆಗೆ ನೀಡಿದ ಗ್ಯಾರೆಂಟಿ ( ಭರವಸೆ ) ಗಳನ್ನು ತನ್ನ ಅಧಿಕಾರ (ವಾರಂಟಿ) ಅವಧಿ ಪ್ರಾರಂಭವಾಗುವ ಮುನ್ನವೇ ಜಾರಿಗೆ ತರಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ತೀರ್ಮಾನಿಸಿದೆ.ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕುವುದು, ಸಾಲದ ಪ್ರಮಾಣ ಇಳಿಮುಖಗೊಳಿಸಿ, ಸಾಲದ ಮೇಲಿನ ಬಡ್ಡಿ ಪಾವತಿ ಪ್ರಮಾಣ ಕಡಿಮೆಗೊಳಿಸಿ ಆರ್ಥಿಕ ಪರಿಣಾಮಗಳನ್ನು ಸರಿದೂಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ನಡೆದ ಮೊದಲ ಸಚಿವ ಸಂಪುಟ ಸಭೆಯ ಅಧ್ಯಕ್ಷತೆ ವಹಿಸಿ ತನ್ನ ಸಹೋದ್ಯೋಗಿಗಳೊಂದಿಗೆ ಸುದೀರ್ಘವಾಗಿ ಚರ್ಚಿಸಿದ ನಂತರ ಸಿದ್ದರಾಮಯ್ಯ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡಿ, ಸಚಿವ ಸಂಪುಟದ ತೀರ್ಮಾನಗಳನ್ನು ಬಹಿರಂಗಪಡಿಸಿದರು.
ಗೃಹ ಜ್ಯೋತಿ ಯೋಜನೆ:
ಈ ಯೋಜನೆಯಡಿ ಗೃಹ ಬಳಕೆದಾರರಿಗೆ 200 ಯೂನಿಟ್ ಉಚಿತ ವಿದ್ಯುತ್ ಪೂರೈಸಲಾಗುವುದು. ಈ ಯೋಜನೆ ಜಾರಿಗೆ ಪ್ರತಿ ತಿಂಗಳು ಸುಮಾರು 1200 ಕೋಟಿ ರೂ.ವೆಚ್ಚವಾಗುತ್ತದೆ.
ಗೃಹ ಲಕ್ಷ್ಮೀ ಯೋಜನೆ;
ಈ ಯೋಜನೆಯಡಿ ಮನೆಯೊಡತಿಗೆ ಪ್ರತಿ ಮಾಹೆ 2000 ರೂ.ಗಳನ್ನು ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುವುದು.
ಅನ್ನಭಾಗ್ಯ ಯೋಜನೆ:
ಬಡತನ ರೇಖೆಗಿಂತಲೂ ಕೆಳಗಿರುವ ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೆ ಪ್ರತಿ ಸದಸ್ಯರಿಗೆ ಹತ್ತು ಕೆ ಜಿ ಅಕ್ಕಿ ಒದಗಿಸಲಾಗುವುದು.
ಯುವ ನಿಧಿ ನಿರುದ್ಯೋಗ ಭತ್ಯೆ ಯೋಜನೆ:
ಪ್ರಸಕ್ತ ಸಾಲಿನಲ್ಲಿ ವಿವಿಧ ಪದವಿ, ಸ್ನಾತಕೋತ್ತರ ಪದವಿ, ಪಿ ಹೆಚ್ ಡಿ ಪಡೆದವರಿಗೆ ಮೊದಲ ಎರಡು ವರ್ಷಗಳು ಅಥವಾ ಸರ್ಕಾರಿ ಅಥವಾ ಖಾಸಗಿ ಉದ್ಯೋಗ ದೊರೆಯುವವರೆಗೆ ಮಾಸಿಕ 3000 ರೂ.ಭತ್ಯೆ, ಡಿಪೋಮಾ ಹೊಂದಿರುವವರಿಗೆ ಮಾಸಿಕ 1500 ರೂ ಭತ್ಯೆ ನೀಡಲಾಗುವುದು.
ಮಹಿಳೆಯರಿಗೆ ಉಚಿತ ಬಸ್ ಪಾಸ್: ಸರ್ಕಾರಿ ಬಸ್ ಗಳಲ್ಲಿ ರಾಜ್ಯದ ಮಹಿಳೆಯರ ಉಚಿತ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು.
ಈ ಎಲ್ಲಾ ಯೋಜನೆಗಳ ಅನುಷ್ಠಾನಕ್ಕೆ ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯು ತಾತ್ವಿಕ ಒಪ್ಪಿಗೆ ನೀಡಿದೆ. ಅಲ್ಲದೆ, ಸರ್ಕಾರಿ ಆದೇಶಗಳನ್ನು ಹೊರಡಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.
ಈ ಎಲ್ಲಾ ಯೋಜನೆಗಳ ಜಾರಿಗೆ 50,000 ಕೋಟಿ ರೂ ಅಗತ್ಯವಿದೆ. ಎಷ್ಟ ಕಷ್ಟ ಎದುರಾದರೂ ಜನತೆಗೆ ನೀಡಿದ ಈ ಭರವಸೆಗಳನ್ನು ಜಾರಿಗೊಳಿಸಲಾಗುವುದು ಎಂದು ಸಿದ್ದರಾಮಯ್ಯ ಪುನರುಚ್ಛರಿಸಿದರು.
ಈ ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸದೇ,ಅರ್ಥಿಕ ದಿವಾಳಿ ಮಾಡದೇ ಎಲ್ಲ ಗ್ಯಾರಂಟಿಗಳನ್ನು ಈಡೇರಿಸುವುದರ ಮೂಲಕ ರಾಜ್ಯದ ಜನರು ನಮ್ಮ ಮೇಲಿಟ್ಟಿರುವ ವಿಶ್ವಾಸ ಮತ್ತು ನಂಬಿಕೆಗಳನ್ನು ಉಳಿಸಿಕೊಳ್ಳಲಾಗುವುದು ಎಂದು ಅವರು ಹೇಳಿದರು.
ಈ ಗ್ಯಾರೆಂಟಿಗಳ ಬಗ್ಗೆ ಇಂದಿನ ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆಯಾದರೂ ಅಂಕಿ-ಅಂಶಗಳ ನಿಖರ ಮಾಹಿತಿ ಲಭ್ಯವಿಲ್ಲದ ಹಿನ್ನೆಲೆಯಲ್ಲಿ ಮುಂದಿನ ವಾರ ನಡೆಯಲಿರುವ ಸಚಿವ ಸಂಪುಟದ ವೇಳೆಗೆ ಗ್ಯಾರಂಟಿಗಳ ಅನುಷ್ಠಾನ ಗ್ಯಾರೆಂಟಿ ಎಂದು ಅವರು ಸ್ಪಷ್ಟಪಡಿಸಿದರು.
ಕಳೆದ ಬಾರಿ 2013 ರಿಂದ 2018 ರವರೆಗಿನ ಅವಧಿಯಲ್ಲಿನ ತಮ್ಮ ನೇತೃತ್ವದ ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವದಲ್ಲಿ ನೀಡಿದ್ದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಇದಲ್ಲದೆ, ಇಂದಿರಾ ಕ್ಯಾಂಟೀನ್, ಸಾಲ ಮನ್ನಾ, ವಿದ್ಯಾ ಸಿರಿ, ಶೂ ಭಾಗ್ಯ, ಪಶು ಭಾಗ್ಯ ಸೇರಿದಂತೆ 30 ಅಪ್ರಕಟಿತ ಭರವಸೆಗಳನ್ನೂ ಜಾರಿಗೊಳಿಸಲಾಗಿದೆ.
ಕರ್ನಾಟಕದಿಂದ ಪ್ರತಿ ವರ್ಷ ನಾಲ್ಕು ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚು ತೆರಿಗೆ ಮೊತ್ತ ಸಂಗ್ರಹವಾದರೂ, ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದೂ ಕರ್ನಾಟಕಕ್ಕೆ ನ್ಯಾಯಯುತವಾಗಿ ದೊರೆಯಬೇಕಾದ ಪಾಲು ದೊರೆಯಲಿಲ್ಲ ಎಂಬ ಅಂಶವನ್ನು ಹೊರಹಾಕಿದ ಮುಖ್ಯಮಂತ್ರಿಯವರು, ರಾಜಸ್ವ ಸಂಗ್ರಹಣೆಯಲ್ಲಿ ಕಠಿಣತೆ,ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಗೂ ಇನ್ನಿತರ ಆಡಳಿತ ಕ್ರಮಗಳನ್ನು ಜಾರಿಗೆ ತಂದು ಜನತೆಗೆ ಕೊಟ್ಟ ಮಾತಿನಂತೆ ಈ ಎಲ್ಲಾ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ಹೇಳಿದರು.
ಇದೇ ಮೇ 22ರಿಂದ ಮೇ 24ರವರೆಗೆ ನೂತನ ಸರಕಾರದ ವಿಧಾನಸಭೆಯ ಅಧಿವೇಶನ ನಡೆಯಲಿದ್ದು, ಎಲ್ಲ ನೂತನ ಶಾಸಕರ ಪ್ರಮಾಣ ವಚನ ಸ್ವೀಕಾರ ಹಾಗೂ ನೂತನ ಸ್ಪೀಕರ್ ಆಯ್ಕೆ ಮಾಡಲಾಗುವುದು. ಸದನದ ಹಿರಿಯ ಸದಸ್ಯ ಆರ್.ವಿ.ದೇಶಪಾಂಡೆ ಅವರನ್ನು ಹಂಗಾಮಿ ಸ್ಪೀಕರ್ ಆಗಿ ಆಯ್ಕೆ ಮಾಡಿದ್ದೇವೆ ಎಂದು ಹೇಳಿದ ಸಿಎಂ ಸಿದ್ದರಾಮಯ್ಯ ಅವರು ಇಂದಿರಾ ಕ್ಯಾಂಟೀನ್ಗಳ ಪುನಃ ಆರಂಭಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಡಾ.ಜಿ.ಪರಮೇಶ್ವರ, ಕೆ.ಹೆಚ್. ಮುನಿಯಪ್ಪ, ಕೆ.ಜೆ.ಜಾರ್ಜ್, ಎಂ.ಬಿ.ಪಾಟೀಲ, ಸತೀಶ ಜಾರಕಿಹೊಳಿ, ರಾಮಲಿಂಗಾರೆಡ್ಡಿ, ಪ್ರಿಯಾಂಕ್ ಖರ್ಗೆ, ಬಿ.ಝಡ್.ಜಮೀರ್ ಅಹಮದ್ ಖಾನ್ ಹಾಗೂ ನೂತನ ಶಾಸಕರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.