i
ಜುಲೈ 12ರಂದು ಹೊಳಲ್ಕೆರೆಗೆ ಲೋಕಾಯುಕ್ತ ಅಧಿಕಾರಿಗಳ ಭೇಟಿ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕರ್ನಾಟಕ ಲೋಕಾಯುಕ್ತ ಚಿತ್ರದುರ್ಗ ವಿಭಾಗದ ಅಧಿಕಾರಿಗಳು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿಗೆ ಇದೇ ಜುಲೈ 12ರಂದು ಖುದ್ದಾಗಿ ಭೇಟಿ ನೀಡಿ ಸಾರ್ವಜನಿಕರಿಂದ ದೂರು, ಅಹವಾಲುಗಳನ್ನು ನಿಗದಿತ ಅರ್ಜಿ ನಮೂನೆಯಲ್ಲಿ ಸ್ವೀಕರಿಸುವರು.
ಸಾರ್ವಜನಿಕರು “ಸರ್ಕಾರಿ ಕಚೇರಿಗಳಲ್ಲಿ ತಮ್ಮ ಕೆಲಸಗಳನ್ನು ಮಾಡಿಕೊಡಲು ಅಲ್ಲಿನ ಅಧಿಕಾರಿ, ಸಿಬ್ಬಂದಿಗಳು ಲಂಚದ ಹಣಕ್ಕಾಗಿ ಬೇಡಿಕೆಯಿಟ್ಟಲ್ಲಿ, ಸರ್ಕಾರವು ಸಾರ್ವಜನಿಕರಿಗಾಗಿ ರೂಪಿಸಲಾಗಿರುವ ಅನೇಕ ಯೋಜನೆಗಳನ್ನು ಸರ್ಕಾರಿ ಅಧಿಕಾರಿಗಳು ಅನುಷ್ಠಾನಗೊಳಿಸದೇ ಇರುವುದು ಮತ್ತು ಅಂತಹ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸಲು ಅನಾವಶ್ಯಕ ವಿಳಂಬ ಮಾಡುತ್ತಿರುವುದು, ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷತನ ಮತ್ತು ತಾರತಮ್ಯ ತೋರುವುದು, ಅರ್ಹ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳ ಲಾಭ ಸರಿಯಾದ ರೀತಿಯಲ್ಲಿ ತಲುಪಿಸದೇ ಇರುವುದು ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ” ದೂರುಗಳನ್ನು ನಿಗಧಿತ ನಮೂನೆ-1&2 ರಲ್ಲಿ ಸಲ್ಲಿಸಬಹುದಾಗಿದೆ.
ಲೋಕಾಯುಕ್ತ ಅಧಿಕಾರಿಗಳ ತಾಲ್ಲೂಕು ಭೇಟಿ ವಿವರ: ಇದೇ ಜುಲೈ 12ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30ರವರೆಗೆ ಹೊಳಲ್ಕೆರೆ ತಾಲ್ಲೂಕು ಪಂಚಾಯಿತಿಯಲ್ಲಿ ಕರ್ನಾಟಕ ಲೋಕಾಯುಕ್ತ ಚಿತ್ರದುರ್ಗ ಪೊಲೀಸ್ ಅಧೀಕ್ಷಕರು ಹಾಜರಿದ್ದು, ಅಹವಾಲು ಸ್ವೀಕರಿಸುವರು ಎಂದು ಕರ್ನಾಟಕ ಲೋಕಾಯುಕ್ತ ಚಿತ್ರದುರ್ಗ ಪೊಲೀಸ್ ಅಧೀಕ್ಷಕ ಎನ್.ವಾಸುದೇವರಾಮ ತಿಳಿಸಿದ್ದಾರೆ.