i
ಕಂದಾಯ ಇಲಾಖೆ ಎಲ್ಲ ಪತ್ರ ವ್ಯವಹಾರಗಳು ಇ-ಆಫೀಸ್ ಮೂಲಕವೇ ಮಾಡುವುದು ಕಡ್ಡಾಯ…
ಚಂದ್ರವಳ್ಳಿ ನ್ಯೂಸ್, ಕಲಬುರ್ಗಿ:
ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿಗಳಿಂದ ಆಗಸ್ಟ್ 15 ರಿಂದ ಸರ್ಕಾರಕ್ಕೆ ಇ-ಆಫೀಸ್ ಮೂಲಕವೇ ಪತ್ರ ವ್ಯವಹಾರ ಮಾಡಬೇಕು. ಭೌತಿಕವಾಗಿ ಪತ್ರ ಸ್ವೀಕರಿಸುವುದಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಎಚ್ಚರಿಕೆ ನೀಡಿದ್ದಾರೆ.
ಕಲಬುರಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂದಾಯ ಇಲಾಖೆ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು ಈ ಬಗ್ಗೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ, ಕಂದಾಯ ಇಲಾಖೆ ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ.ತಾಂತ್ರಿಕವಾಗಿ ಸಾಕಷ್ಟು ಮುಂದುವರೆದಿದ್ದೇವೆ. ತಂತ್ರಜ್ಞಾನ ಹೆಚ್ಚಾದರು ಅನೇಕ ಸರ್ಕಾರಿ ಕಚೇರಿಯಲ್ಲಿ ಪತ್ರ ವ್ಯವಹಾರ ನಿಂತಿಲ್ಲ. ಆದರೆ ಹಳೇ ಕಾಲದ ಪತ್ರ ವ್ಯವಹಾರವನ್ನು ಕೈಬಿಟ್ಟು ತಂತ್ರಜ್ಞಾನಕ್ಕೆ ಒಗ್ಗಿ ಇ-ಆಫೀಸ್ ಅನುಷ್ಠಾನಗೊಳಿಸಬೇಕು ಎಂದು ಸಚಿವರು ಸೂಚನೆ ನೀಡಿದರು.
ಒಂದು ಪ್ರಕರಣ ಉಲ್ಲೇಖಿಸಿದ ಸಚಿವ ಕೃಷ್ಣ ಬೈರೇಗೌಡ, ಗ್ರಾಮ ಪಂಚಾಯತಿಯ ಸ್ವಚ್ಛತಾ ಸಂಕೀರ್ಣಕ್ಕೆ ಜಮೀನು ನೀಡಲು ಎರಡು ವರ್ಷ ಬೇಕೆ? ಮೊನ್ನೆ ಈ ಕಡತ ಇ-ಆಫೀಸ್ನಲ್ಲಿ ನನ್ನ ಲಾಗಿನ್ಗೆ ಬಂದಾಗ 2 ದಿನದಲ್ಲಿ ವಿಲೇವಾರಿ ಮಾಡಿದ್ದೇನೆ ಎಂದರು.
ಇ-ಆಫೀಸ್ ಸಹಜವಾಗಿ ಕಾರ್ಯ ದಕ್ಷತೆ ಹೆಚ್ಚಿಸಲಿದೆ. ಯಾವುದೇ ಸ್ಥಳದಲ್ಲಿಂದಲೂ ನೀವು ಕಡತ ವಿಲೇವಾರಿ ಮಾಡಬಹುದಾಗಿದೆ. ಸ್ವತ ನಾನು ಇ-ಆಫೀಸ್ ಮೂಲಕ ಕಡತ ವಿಲೇವಾರಿ ಮಾಡುತ್ತಿದ್ದೇನೆ. ಶಾಲೆ, ಗ್ರಾಮ ಪಂಚಾಯತಿಗೆ ಜಮೀನು ನೀಡಲು ಇಷ್ಟೊಂದು ವಿಳಂಬವೇಕೆ, ಇದರಲ್ಲಿ ಕಾಯುವಂತದೇನಿದೆ ಎಂದು ಡಿ.ಸಿ. ಅವರನ್ನು ಪ್ರಶ್ನಿಸಿದರು.
ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ ಕಠಾರಿಯಾ ಮಾತನಾಡಿ, ಇ-ಕಚೇರಿ ಅನುಷ್ಟಾನಕ್ಕೆ ಕೂಡಲೇ ಎಲ್ಲಾ ಜಿಲ್ಲಾಧಿಕಾರಿಗಳು, ಕೆಸ್ವಾನ್ ಸಂಪರ್ಕ ಪಡೆದುಕೊಳ್ಳಬೇಕು ಮತ್ತು ತಹಶೀಲ್ದಾರ ಕಚೇರಿ ಹಂತದಲ್ಲಿಯೂ ಇದನ್ನು ಅನುಷ್ಟಾನಕ್ಕೆ ಕಾಲಮಿತಿ ನಿಗದಿಪಡಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.