i
ಅಕ್ರಮವಾಗಿ ಪಟಾಕಿ ದಾಸ್ತಾನು: ಓರ್ವನ ವಿರುದ್ದ ಮೊಕದ್ದಮೆ…
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಚಳ್ಳಕೆರೆ ನಗರದ ಕಟುಕರ ಬೀದಿಯ ಖಾಸಗಿ ಮನೆಯೊಂದರಲ್ಲಿ ಸರ್ಕಾರದಿಂದ ಯಾವುದೇ ಅನುಮತಿ ಪಡೆಯದೆ ದಾಸ್ತಾನು ಮಾಡಿದ್ದ ಪಟಾಕಿಯನ್ನು ಇಲ್ಲಿನ ಪೊಲೀಸರು ಪತ್ತೆಹಚ್ಚಿ ವಶಕ್ಕೆ ಪಡೆದು ಮಾಲೀಕನ ವಿರುದ್ದ ಪ್ರಕರಣ ದಾಖಲಿಸಿದ್ಧಾರೆ. ಪಿಎಸ್ಐ ಕೆ.ಸತೀಶ್ನಾಯ್ಕ ಈ ಬಗ್ಗೆ ಮಾಹಿತಿ ನೀಡಿ, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಬಾತ್ಮೀದಾರರ ಮಾಹಿತಿಯಂತೆ ಕಟುಕರ ಬೀದಿಯಲ್ಲಿರುವ ಮಾರುತಿಯವರಿಗೆ ಸೇರಿದ ಕಟ್ಟಡದಲ್ಲಿ ಚಿತ್ರದುರ್ಗದ ಎಂ.ಎಂ.ಆದಿತ್ಯ ಎಂಬುವವರು ಪಟಾಕಿಗಳನ್ನು ದಾಸ್ತಾನು ಮಾಡಿದ್ದು, ಸಾರ್ವಜನಿಕರಿಗೆ ಅಪಾಯವಾಗುವ ಸಾಧ್ಯತೆ ಇದ್ದು ಅನುಮತಿ ಪಡೆಯದೆ ಸೂಕ್ತ ವ್ಯವಸ್ಥೆ ಮಾಡಿದೆ ನಿರ್ಲಕ್ಷ್ಯೆ ತೋರಿದ ಹಿನ್ನೆಲೆಯಲ್ಲಿ ಮಾಲು ವಶಪಡಿಸಿಕೊಂಡು ಆತನ ವಿರುದ್ದ ಪ್ರಕರಣ ದಾಖಲು ಮಾಡಲಾಗಿದೆ. ಸರ್ಕಾರದಿಂದ ಅನುಮತಿ ಪಡೆಯದೆ ಮುಂಜಾಗ್ರತೆ ವಹಿಸದೆ ಪಟಾಕಿ ಮಾರಾಟ ಮಾಡಲು ಯತ್ನಸುವ ಹಾಗೂ ಪ್ರಾಣಕ್ಕೆ ಅಪಾಯವನ್ನುಂಟು ಮಾಡುವ ಬಾರಿ ಪ್ರಮಾಣದ ಪಟಾಕಿ ಮಾರಾಟ ಕಂಡುಬಂದಲ್ಲಿ ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಅವರು ಮನವಿ ಮಾಡಿದ್ಧಾರೆ.