ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ನಗರದಲ್ಲಿ ಗ್ರಾಮೀಣಾಭಿವೃದ್ಧಿ ಸಹಕಾರಿ ಸೊಸೈಟಿ ಹೆಸರಿನಲ್ಲಿ ಕೋಟಿಗಟ್ಟಲೆ ರೂಪಾಯಿ ಸಾರ್ವಜನಿಕ ಹಣವನ್ನು ಸಂಗ್ರಹಿಸಿ, ಕಳೆದ ಎರಡು ವರ್ಷಗಳಿಂದ ಸೊಸೈಟಿಗೆ ಬೀಗ ಹಾಕಿ ತಲೆಮರೆಸಿಕೊಂಡಿರುವ ಸಿದ್ದಲಿಂಗರಾಧ್ಯ ಅಲಿಯಾಸ್ ಆರಾಧ್ಯ ಎಂಬಾತನ ವಂಚನೆಯ ವಿರುದ್ಧ ಸಾರ್ವಜನಿಕರು ಹಾಗೂ ರೈತರು ಆಕ್ರೋಶ ಹೊರಹಾಕಿದ್ದಾರೆ.
ಸೊಸೈಟಿಯಲ್ಲಿ ಉಳಿತಾಯ ಖಾತೆ, ಆರ್‌ಡಿ, ಪಿಗ್ಮಿ ಖಾತೆಗಳ ಮೂಲಕ ಸಣ್ಣ-ಪುಟ್ಟ ರೈತರು, ಶ್ರಮಿಕರು ಹಾಗೂ ಹಿರಿಯ ನಾಗರಿಕರು ತಮ್ಮ ಕಷ್ಟದ ಹಣವನ್ನು ಠೇವಣಿ ಇಟ್ಟಿದ್ದರು. ಕುಟುಂಬದ ಮಕ್ಕಳ ಹಾಗೂ ಮೊಮ್ಮಕ್ಕಳ ಮದುವೆ, ತುರ್ತು ಆರೋಗ್ಯ ತಪಾಸಣೆ, ಆಸ್ಪತ್ರೆ ವೆಚ್ಚ ಮತ್ತು ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕಾಗಿ ಕಾಯ್ದಿರಿಸಿದ್ದ ಹಣ ಸಿಗದೆ ಗ್ರಾಹಕರು ಬೀದಿಗೆ ಬಿದ್ದಿದ್ದಾರೆ. ಈ ಕುರಿತು ಸೊಸೈಟಿಯ ಅಧ್ಯಕ್ಷರನ್ನು ಪ್ರಶ್ನಿಸಿದರೆ "ನನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ" ಎಂದು ಕೈತೊಳೆದುಕೊಳ್ಳುತ್ತಿದ್ದಾರೆ.
ಜಮೀನು ಮಾರಾಟದ ಹೆಸರಲ್ಲೂ ವಂಚನೆ:
ಕೇವಲ ಸೊಸೈಟಿ ಠೇವಣಿ ಮಾತ್ರವಲ್ಲದೆ, "ನನ್ನ ಜಮೀನು ಮಾರಾಟಕ್ಕಿದೆ, ನಿಮಗೆ ಮಾರಾಟ ಮಾಡಿಸಿಕೊಡುತ್ತೇನೆ" ಎಂದು ನಂಬಿಸಿ ಹಲವು ಹಿರಿಯ ನಾಗರಿಕರು ಹಾಗೂ ರೈತರಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ಆರಾಧ್ಯ ಮೋಸ ಎಸಗಿರುವುದು ಬೆಳಕಿಗೆ ಬಂದಿದೆ.
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ:
ಸೊಸೈಟಿ ನೋಂದಣಿಯಾದಂದಿನಿಂದ ಇದುವರೆಗೆ ಯಾವುದೇ ಸೂಕ್ತ ಪರಿಶೀಲನೆ ಅಥವಾ ತನಿಖೆ ನಡೆಸದೆ, ಬೇಕಾಬಿಟ್ಟಿಯಾಗಿ ಸೊಸೈಟಿ ನಡೆಸಲು ಅವಕಾಶ ಮಾಡಿಕೊಟ್ಟಿದ್ದ ಸಹಕಾರ ಸಂಘಗಳ ಉಪ ನಿಬಂಧಕರ ಧೋರಣೆಗೆ ಠೇವಣಿದಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ವಂಚನೆಗೊಳಗಾದ ಎನ್ನಾಗಣ್ಣ, ಬಿ. ನಾಗರಾಜು, ಪುಟ್ಟರಂಗ ನಾಯ್ಕ, ಇಂಡಿಯನ್ ಗ್ಯಾಸ್ ಮಾಲೀಕ ಚಿದಾನಂದ, ಪ್ರಗತಿಪರ ರೈತ ಜಿ. ದೇವರಾಜ್, ಸಿಮೆಂಟ್ ಅಂಗಡಿ ಮಾಲೀಕ ಜಗದೀಶ್, ರಮೇಶ್, ರಾಜಶೇಖರ್, ಲಕ್ಷ್ಮಣ್ ಆರ್., ಹಾಗೂ ತಾಲೂಕು ರೈತ ಸಂಘದ ಗೌರವಾಧ್ಯಕ್ಷ ಆಲೂರು ಸಿ. ಸಿದ್ದರಾಮಣ್ಣ ಸೇರಿದಂತೆ ಅನೇಕ ಬಾಧಿತರು ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮತ್ತು ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರಿಗೆ ದೂರು ನೀಡಿದ್ದಾರೆ.
ರೈತ ಸಂಘಕ್ಕೆ ಮನವಿ ಹಾಗೂ ಆಗ್ರಹ: ದಿಕ್ಕು ತೋಚದ ಸ್ಥಿತಿಯಲ್ಲಿರುವ ಸಂತ್ರಸ್ತರು ಪ್ರಸ್ತುತ ರೈತ ಸಂಘದ ಮೊರೆ ಹೋಗಿದ್ದಾರೆ. ಆರೋಪಿ ಆರಾಧ್ಯ ವಂಚನೆಯಿಂದ ಸಂಪಾದಿಸಿ ಮಾಡಿರುವ ಆಸ್ತಿಪಾಸ್ತಿಗಳನ್ನು ತಕ್ಷಣವೇ ವಶಪಡಿಸಿಕೊಂಡು, ನೊಂದ ಗ್ರಾಹಕರು ಹಾಗೂ ರೈತರ ಹಣವನ್ನು ಶೀಘ್ರವೇ ಮರಳಿಸಿಕೊಡಬೇಕೆಂದು ಪೊಲೀಸ್ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖಾಧಿಕಾರಿಗಳನ್ನು ತಾಲೂಕು ರೈತ ಸಂಘ ಮತ್ತು ಸಂತ್ರಸ್ತರು ಒತ್ತಾಯಿಸಿದ್ದಾರೆ.



