ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ರೈತರು ತೀವ್ರ ಸಂಕಷ್ಟದಲ್ಲಿದ್ದರೂ ಸರ್ಕಾರ ಕೇವಲ 2,500 ರೂಪಾಯಿ ಪರಿಹಾರ ಧನ ಘೋಷಿಸಿ, ಈವರೆಗೆ ಅವರ ಖಾತೆಗೆ ಒಂದು ರೂಪಾಯಿಯನ್ನೂ ಜಮೆ ಮಾಡಿಲ್ಲ. ಇದು ರಾಜಕೀಯವಲ್ಲದೆ ಮತ್ತೇನು? ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸರ್ಕಾರವನ್ನು ತೀವ್ರವಾಗಿ ಪ್ರಶ್ನಿಸಿದ್ದಾರೆ.
ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ರೈತ ವಿರೋಧಿ ಧೋರಣೆ ಹಾಗೂ ಸಚಿವರ ಬೇಜವಾಬ್ದಾರಿ ಹೇಳಿಕೆಗಳ ವಿರುದ್ಧ ಹರಿದಾಯ್ದರು.
SDRF ಹಣ ಮೊದಲು ನೀಡಿ, ಆಮೇಲೆ ಕೇಂದ್ರವನ್ನು ಕೇಳಿ:
"ನಾವು ಪ್ರತಿ ಹೆಕ್ಟೇರ್‌ಗೆ 25,000 ರೂಪಾಯಿ ಪರಿಹಾರ ನೀಡಬೇಕೆಂದು ಬೇಡಿಕೆ ಇಟ್ಟರೆ, ಅದನ್ನು ಸರ್ಕಾರ ರಾಜಕೀಯ ಎಂದು ಕರೆಯುತ್ತಿದೆ. ಮೊದಲು ರಾಜ್ಯ ಸರ್ಕಾರ ತನ್ನ ಪಾಲಿನ 25,000 ರೂಪಾಯಿ ಪರಿಹಾರ ಘೋಷಣೆ ಮಾಡಲಿ, ಆನಂತರ ಕೇಂದ್ರ ಸರ್ಕಾರದ ಬಳಿ ನಿಯೋಗ ಕರೆದುಕೊಂಡು ಹೋಗೋಣ. ರಾಜ್ಯದ ರಾಜ್ಯ ವಿಕೋಪ ಸ್ಪಂದನಾ ನಿಧಿಯಿಂದ ಮೊದಲು ಪರಿಹಾರ ಕೊಡಿ, ಬಳಿಕ ರಾಷ್ಟ್ರೀಯ ವಿಕೋಪ ಸ್ಪಂದನಾ ನಿಧಿ ಹಣ ಕೇಳೋಣ" ಎಂದು ಅವರು ಸಲಹೆ ನೀಡಿದರು.
ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದೆ: ಕೇಂದ್ರದ ಬಳಿ ನಿಯೋಗ ಕರೆದುಕೊಂಡು ಹೋಗುವ ವಿಚಾರವಾಗಿ ಸ್ಪಷ್ಟನೆ ನೀಡಿದ ಅವರು, "ನಾವು ನಿಯೋಗದಲ್ಲಿ ಬರುವುದಿಲ್ಲ ಎಂದು ಎಲ್ಲೂ ಹೇಳಿಲ್ಲ. ಆದರೆ ಸರ್ಕಾರ ಇದುವರೆಗೆ ರೈತರಿಗೆ ಒಂದು ರೂಪಾಯಿಯನ್ನೂ ಕೊಟ್ಟಿಲ್ಲ. ಸರ್ಕಾರ ಸಂಪೂರ್ಣವಾಗಿ ದಿವಾಳಿಯಾಗಿದೆಯೇ? ಹೊರಗಡೆ ಶ್ರೀಮಂತಿಕೆ ಮೆರೆಯುವಂತೆ ಮಾತನಾಡುವ ಈ ಸರ್ಕಾರದ ನೈಜ ಬಂಡವಾಳ ನಮಗೆ ಗೊತ್ತಿದೆ. ಕೈಯಲ್ಲಿ ಭಿಕ್ಷಾಪಾತ್ರೆ ಹಿಡಿದು ನಿಂತಿರುವ ಪರಿಸ್ಥಿತಿ ಬಂದಿದ್ದರೂ, ಭಿಕ್ಷೆ ಎತ್ತಿಯಾದರೂ ಸರಿ, ತಕ್ಷಣವೇ ರೈತರ ಸಮಸ್ಯೆಗೆ ಸ್ಪಂದಿಸಿ" ಎಂದು ಆಗ್ರಹಿಸಿದರು.
ಕಬ್ಬು ಬೆಳೆಗಾರರ ಸಮಸ್ಯೆಯನ್ನು ಪ್ರಸ್ತಾಪಿಸಿದ ಅವರು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ವಿಷಯ ತಿಳಿಯುತ್ತಿದ್ದಂತೆ ತಕ್ಷಣವೇ ಸ್ಪಂದಿಸಿ ಸಭೆ ನಡೆಸಿ ಸಮಸ್ಯೆಯನ್ನು ಬಗೆಹರಿಸಿದ್ದಾರೆ. ಪರಿಣಾಮವಾಗಿ ರೈತರ ಹೋರಾಟವೂ ಸ್ಥಗಿತಗೊಂಡಿದೆ. ಆದರೆ ರಾಜ್ಯ ಸರ್ಕಾರ ಕೇವಲ ಪತ್ರ ಬರೆಯುವುದು ಮತ್ತು ಹೇಳಿಕೆಗಳನ್ನು ನೀಡುವುದಕ್ಕಷ್ಟೇ ಸೀಮಿತವಾಗಿದೆ ಎಂದು ಟೀಕಿಸಿದರು.
ಆತ್ಮಹತ್ಯೆ ತಡೆಯಲು 10,000 ನೀಡಿ: ನಾಟಕ ಬಂದ್ ಮಾಡಿ:
"ರೈತರ ಆತ್ಮಹತ್ಯೆ ತಡೆಯಲು ಕನಿಷ್ಠ 10,000 ರೂಪಾಯಿ ತಕ್ಷಣದ ನೆರವು ನೀಡಿ. ಆದರೆ ಸರ್ಕಾರ ಒಂದು ರೂಪಾಯಿಯನ್ನೂ ನೀಡುತ್ತಿಲ್ಲ. ಈ ಸರ್ಕಾರ ಕೇವಲ ನಾಟಕ ಮಾಡುವ ಸರ್ಕಾರವಾಗಬಾರದು, ರೈತರ ಸಂಕಷ್ಟಗಳಿಗೆ ನೈಜವಾಗಿ ಸ್ಪಂದಿಸಿ ಪರಿಹಾರ ಕಂಡುಕೊಳ್ಳುವ ಸರ್ಕಾರವಾಗಬೇಕು" ಎಂದು ಒತ್ತಾಯಿಸಿದರು.
ಗೃಹ ಸಚಿವರು ಮತ್ತು ಪ್ರಿಯಾಂಕ್ ಖರ್ಗೆ ವಿರುದ್ಧ ದಾಳಿ:
ಸ್ಟಿಂಗ್ ಕ್ರಿಯಾಶೀಲ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವರ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ ಛಲವಾದಿ ನಾರಾಯಣಸ್ವಾಮಿ, "ಗೃಹ ಸಚಿವರು ಕೇವಲ ಮಾತುಗಳನ್ನಾಡಿದರೆ ಸಾಲದು, ಅವರು ಯಾರನ್ನು ರಕ್ಷಿಸಲು ಹೊರಟಿದ್ದಾರೆ? ಗೃಹ ಸಚಿವ ಸ್ಥಾನದಲ್ಲಿರುವವರು ಶ್ರದ್ಧೆ ಹಾಗೂ ನಿಷ್ಪಕ್ಷಪಾತದಿಂದ ನಡೆದುಕೊಳ್ಳಬೇಕು. ಆದರೆ ಪ್ರಸ್ತುತ ಗೃಹ ಸಚಿವರು ನಿಷ್ಪಕ್ಷಪಾತವಾಗಿದ್ದಾರೆಯೇ?" ಎಂದು ಸವಾಲೆಸೆದರು.
ಇದೇ ವೇಳೆ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ವಾಗ್ದಾಳಿ ನಡೆಸಿ, "ಪ್ರಿಯಾಂಕ್ ಖರ್ಗೆ ಅವರು ಅತ್ಯಂತ ಅವಿವೇಕತನದಿಂದ ಮಾತನಾಡುತ್ತಾರೆ. ಅವರಿಗೆ ಸಚಿವರಾಗಿರಲು ಯಾವುದೇ ಅರ್ಹತೆ ಇಲ್ಲ. ವಿಷಯದ ಬಗ್ಗೆ ಜ್ಞಾನವಿಲ್ಲದಿದ್ದಾಗ ಅದರಿಂದ ತಪ್ಪಿಸಿಕೊಳ್ಳಲು ವಾಚಾಳಿಯಂತೆ ಮಾತನಾಡುತ್ತಾರೆ" ಎಂದು ತೀವ್ರವಾಗಿ ಕಿಡಿಕಾರಿದರು.



