ಚಂದ್ರವಳ್ಳಿ ನ್ಯೂಸ್, ಮೈಸೂರು:
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಮೆರವಣಿಗೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕೃತವಾಗಿ ಚಾಲನೆ ನೀಡಿದ್ದು, ಐತಿಹಾಸಿಕ ನಂದಿಧ್ವಜಕ್ಕೆ ವಿಶೇಷ ಪೂಜೆ ಸಲ್ಲಿಸಿದರು.
ಸಾಂಪ್ರದಾಯಿಕ ಮೈಸೂರು ಪೇಟ ಧರಿಸಿ ಗಮನ ಸೆಳೆದ ಡಿ.ಕೆ. ಶಿವಕುಮಾರ್ ಅವರು ಸರಳತೆಯನ್ನು ಮೆರೆದರು. ತಮಗಾಗಿ ತಂದಿದ್ದ ಹೂವಿನ ಹಾರವನ್ನು ಧರಿಸಲು ಸೌಜನ್ಯಪೂರ್ವಕವಾಗಿ ನಿರಾಕರಿಸಿದ ಅವರು, ಆ ಹಾರವನ್ನು ನಂದಿಧ್ವಜಕ್ಕೆ ಸಮರ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಅವರಿಗೆ ತಾಯಿ ಚಾಮುಂಡೇಶ್ವರಿಯ ದೇವಿಯ ಬೆಳ್ಳಿಯ ವಿಗ್ರಹವನ್ನು ಸ್ಮರಣಿಕೆಯಾಗಿ ನೀಡಲಾಯಿತು. ನಂದಿಧ್ವಜ ಪೂಜೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, "ಇದು ನನ್ನ ಬದುಕಿನ ಅತ್ಯಮೂಲ್ಯ ಮತ್ತು ಎಂದೆಂದಿಗೂ ಮರೆಯಲಾಗದ ದಿನ. ತಾಯಿ ಚಾಮುಂಡೇಶ್ವರಿಯ ಆಶೀರ್ವಾದದಿಂದ ನನಗೆ ಈ ಸುಸಂದರ್ಭ ಒಲಿದುಬಂದಿದೆ. ತಾಯಿಯ ಕೃಪಾಶೀರ್ವಾದವೇ ನಮಗೆ ದೊಡ್ಡ ಶಕ್ತಿ. ರಾಜ್ಯದಲ್ಲಿ ಮಳೆ-ಬೆಳೆ ಸಮೃದ್ಧವಾಗಿರಲಿ ಮತ್ತು ಎಲ್ಲರೂ ಸುಖ-ಶಾಂತಿಯಿಂದ ಇರಲಿ ಎಂದು ತಾಯಿಯಲ್ಲಿ ಪ್ರಾರ್ಥಿಸಿದ್ದೇನೆ" ಎಂದು ತಿಳಿಸಿದರು.



