ಚಂದ್ರವಳ್ಳಿ ನ್ಯೂಸ್, ಬಳ್ಳಾರಿ:
ದಸರಾ ಹಬ್ಬದ ರಜೆಯ ಸಂಭ್ರಮದಲ್ಲಿದ್ದ ಕುಟುಂಬವೊಂದರಲ್ಲಿ ಆಘಾತಕಾರಿ ಹಾಗೂ ಶೋಕಸಾಗರ ತಂದ ಘಟನೆಯೊಂದು ಬುಧವಾರ ನಡೆದಿದೆ. ಐತಿಹಾಸಿಕ ಬಳ್ಳಾರಿ ಕೋಟೆ ವೀಕ್ಷಣೆಗೆ ತೆರಳಿದ್ದ ತಂದೆ ಹಾಗೂ ಮಗ ಬೆಟ್ಟದ ಮೇಲಿನ ನೀರಿನ ಹೊಂಡದಲ್ಲಿ ಕಾಲು ಜಾರಿ ಮುಳುಗಿ ಮೃತಪಟ್ಟಿದ್ದಾರೆ.
ಆಂಧ್ರಪ್ರದೇಶದ ಕಣೇಕಲ್ ಗ್ರಾಮದ ಮೂಲದ ರಮೇಶ್ (38) ಹಾಗೂ ಅವರ 10 ವರ್ಷದ ಮಗ ಹೊನ್ನೂರಸ್ವಾಮಿ ಮೃತ ದುರ್ದೈವಿಗಳು.
ಆಯುಧಪೂಜೆ ರಜೆ ನಿಮಿತ್ತ ಮೂರು ಕುಟುಂಬಗಳು ಒಟ್ಟಾಗಿ ಬಳ್ಳಾರಿ ಕೋಟೆಗೆ ಪ್ರವಾಸಕ್ಕೆ ಬಂದಿದ್ದವು. ಕೋಟೆಯ ವೀಕ್ಷಣೆ ಮಾಡುತ್ತಿರುವ ವೇಳೆ, ಬಾಲಕ ಹೊನ್ನೂರಸ್ವಾಮಿ ಬೆಟ್ಟದ ಮೇಲಿರುವ ನೀರಿನ ಹೊಂಡದಲ್ಲಿ ಮೀನುಗಳನ್ನು ನೋಡಲು ಹೋಗಿದ್ದನು. ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಹೊಂಡಕ್ಕೆ ಬಿದ್ದಿದ್ದಾನೆ. ಮಗ ನೀರಿನಲ್ಲಿ ಮುಳುಗುವುದನ್ನು ಕಂಡು ಗಾಬರಿಗೊಂಡ ತಂದೆ ರಮೇಶ್, ಮಗನನ್ನು ರಕ್ಷಿಸುವ ಸಲುವಾಗಿ ಕೂಡಲೇ ಹೊಂಡಕ್ಕೆ ಇಳಿದಿದ್ದಾರೆ. ಆದರೆ, ಇಬ್ಬರಿಗೂ ಈಜು ಬಾರದ ಕಾರಣ ನೀರಿನ ಆಳಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ.
ಘಟನೆಯ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಕೌಲ್ಬಜಾರ್ ಠಾಣೆಯ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಬಂದರು. ತಕ್ಷಣವೇ ಕಾರ್ಯಾಚರಣೆ ನಡೆಸಿ ಇಬ್ಬರ ಮೃತದೇಹಗಳನ್ನು ಹೊಂಡದಿಂದ ಹೊರತೆಗೆಯುವಲ್ಲಿ ಯಶಸ್ವಿಯಾದರು. ಹಬ್ಬದ ದಿನದಂದೇ ತಂದೆ-ಮಗ ಇಬ್ಬರೂ ಕಣ್ಣುಮುಚ್ಚಿರುವುದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟುವಂತೆ ಮಾಡಿದೆ.
ಈ ದುರ್ಘಟನೆ ಕುರಿತು ಕೌಲ್ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮುಂದಿನ ತನಿಖೆ ಮುಂದುವರಿಸಿದ್ದಾರೆ.



