ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ವಶದಲ್ಲಿದ್ದ ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಹಾಗೂ ಸದಸ್ಯೆ ಗೀತಾ ಅವರನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದೆ.
ಈ ಹಿಂದೆ ಅಕ್ಟೋಬರ್ 7 ರಂದು ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಅಕ್ಟೋಬರ್ 19 ರವರೆಗೆ ಇಡಿ ಕಸ್ಟಪಿಗೆ ನೀಡಲಾಗಿತ್ತು. ಸೋಮವಾರ ಕಸ್ಟಡಿ ಅವಧಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಆರೋಪಿಗಳನ್ನು ಪುನಃ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಈ ವೇಳೆ ಇಡಿಯಿಂದ ಹೆಚ್ಚಿನ ಕಸ್ಟಡಿಗೆ ಮನವಿ ಮಾಡದ ಕಾರಣ, ನ್ಯಾಯಾಲಯವು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದೆ.
ಮತ್ತೊಂದು ಅಕ್ರಮದ ತನಿಖೆ ಕೈಗೆತ್ತಿಕೊಂಡ ಇಡಿ:
ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮದ ಬೆನ್ನಲ್ಲೇ ಕೆಪಿಎಸ್‌ಸಿಯ ಮತ್ತೊಂದು ಪರೀಕ್ಷಾ ಹಗರಣದ ತನಿಖೆಯನ್ನು ಇಡಿ ಚುರುಕುಗೊಳಿಸಿದೆ. ವಾಣಿಜ್ಯ ಇಲಾಖೆಯ 50 ಕೈಗಾರಿಕಾ ವಿಸ್ತಾರಣಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಕುರಿತು ಶಿವಶಂಕರಪ್ಪ ಸಾಹುಕಾರ್ ಪುತ್ರಿ ಸುಮಾ ಸಾಹುಕಾರ್ ವಿರುದ್ಧ ಈಗಾಗಲೇ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದೀಗ ಈ ತನಿಖೆಯನ್ನು ಇಡಿ ತನ್ನ ವಶಕ್ಕೆ ತೆಗೆದುಕೊಂಡಿದೆ.
ಸುಮಾ ಸಾಹುಕಾರ್ ಅವರು ಕಡಿಮೆ ಆದಾಯ ಪ್ರಮಾಣಪತ್ರ ತೋರಿಸಿ 3B ಮೀಸಲಾತಿ ಅಡಿಯಲ್ಲಿ ಈ ಹುದ್ದೆಯ ಪರೀಕ್ಷೆಗೆ ಹಾಜರಾಗಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ. 2025ರ ಜುಲೈನಲ್ಲಿ ಪರೀಕ್ಷೆ ನಡೆದು, 2026ರ ಫೆಬ್ರವರಿಯಲ್ಲಿ ಪ್ರಕಟವಾದ ಅರ್ಹತಾ ಪಟ್ಟಿಯಲ್ಲಿ ಸುಮಾ ಸಾಹುಕಾರ್ ಹೆಸರು ಸ್ಥಾನ ಪಡೆದಿತ್ತು.
ನಕಲಿ ಆದಾಯ ಪ್ರಮಾಣಪತ್ರದ ಗೋಲ್‌ಮಾಲ್:
ಪರೀಕ್ಷೆಗೆ ಸಲ್ಲಿಸಿದ್ದ ಜಾತಿ ಮತ್ತು ಆದಾಯ ಪ್ರಮಾಣ ಪತ್ರದಲ್ಲಿ ವಾರ್ಷಿಕ ಆದಾಯ ಕೇವಲ 40,000 ರೂಪಾಯಿ ಎಂದು ಸುಮಾ ನಮೂದಿಸಿದ್ದರು. ಆದರೆ, ತನಿಖೆ ವೇಳೆ ಅವರ ತಂದೆಗೆ 2019ರಲ್ಲೇ ತಿಂಗಳಿಗೆ 2,05,100 ಹಾಗೂ 2021ರ ಬಳಿಕ 2,25,000 ಸಂಬಳವಿತ್ತು ಎಂಬುದು ಬೆಳಕಿಗೆ ಬಂದಿದೆ. ಅಲ್ಲದೆ, ರಾಜ್ಯಪಾಲರಿಗೆ ಸಲ್ಲಿಸಿರುವ ಘೋಷಣೆಯಂತೆ ನಿಗದಿತ ಮಿತಿಗಿಂತ ಹೆಚ್ಚಿನ ಸ್ಥಿರ ಆಸ್ತಿಯನ್ನು ಹೊಂದಿರುವುದು ಇಡಿ ತನಿಖೆಯಿಂದ ಬಹಿರಂಗವಾಗಿದೆ.
3B ಮೀಸಲಾತಿಯಡಿ ಪರೀಕ್ಷೆ ಬರೆಯಲು ಕುಟುಂಬದ ವಾರ್ಷಿಕ ಆದಾಯ 6 ರಿಂದ 8 ಲಕ್ಷ ರೂಪಾಯಿ ಒಳಗಿರಬೇಕು. ಆದರೆ, ವಾಸ್ತವದಲ್ಲಿ ಭಾರೀ ಆದಾಯವಿದ್ದರೂ ನಕಲಿ ಜಾತಿ ಮತ್ತು ಆದಾಯ ಪ್ರಮಾಣಪತ್ರವನ್ನು ನೀಡಿ ಸರ್ಕಾರದ ಸೌಲಭ್ಯ ಹಾಗೂ ಹುದ್ದೆಯನ್ನು ದುರುಪಯೋಗಪಡಿಸಿಕೊಳ್ಳಲು ಯತ್ನಿಸಿರುವುದು ತನಿಖೆಯಲ್ಲಿ ದೃಢಪಟ್ಟಿದೆ.
ಮುಂದುವರಿದ ಇಡಿ ತನಿಖೆ: ಶಿವಶಂಕರಪ್ಪ ಸಾಹುಕಾರ್ ಕೆಪಿಎಸ್‌ಸಿ ಅಧ್ಯಕ್ಷರಾಗಿ ನೇಮಕಗೊಂಡ ಬಳಿಕ ನಡೆದ ವಿವಿಧ ನೇಮಕಾತಿಗಳ ಕುರಿತು ಇಡಿ ವ್ಯಾಪಕ ತನಿಖೆ ಮುಂದುವರಿಸಿದೆ. 2022ರಿಂದ ಇಲ್ಲಿಯವರೆಗೆ ನಡೆದಿರುವ ಬಹುತೇಕ ನೇಮಕಾತಿಗಳಲ್ಲಿ ಭಾರೀ ಪ್ರಮಾಣದ ಅಕ್ರಮಗಳು ನಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಮುಂಬರುವ ದಿನಗಳಲ್ಲಿ ಇನ್ನು ಏನೆಲ್ಲಾ ಹಗರಣಗಳು ಹೊರಬೀಳಲಿವೆ ಎಂಬುದನ್ನು ಕಾದು ನೋಡಬೇಕಿದೆ.



