ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಳೆದ ಹಣಕಾಸು ವರ್ಷದಲ್ಲಿ ರಾಜ್ಯಕ್ಕೆ 12,939 ಮಿಲಿಯನ್ ಡಾಲರ್ ವಿದೇಶಿ ನೇರ ಬಂಡವಾಳ ಬಂದಿದ್ದು, ದೇಶದಲ್ಲೇ ಕರ್ನಾಟಕ 2ನೇ ಸ್ಥಾನ ಪಡೆದುಕೊಂಡಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯ, ವಿಶ್ವೇಶ್ವರಯ್ಯ ರಫ್ತು ಉತ್ತೇಜನ ಸಂಸ್ಥೆ ಹಾಗೂ ಭಾರತೀಯ ರಫ್ತು ಸಂಘಟನೆಗಳ ಒಕ್ಕೂಟದ ಸಹಯೋಗದಲ್ಲಿ ಆಯೋಜಿಸಲಾಗಿದ್ದ 'ಮುಕ್ತ ವ್ಯಾಪಾರ ಒಪ್ಪಂದಗಳ ಪ್ರಯೋಜನ' ಕುರಿತ ರಾಜ್ಯ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
1 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿ: ಕೇಂದ್ರ ಸರ್ಕಾರವು ಯುಎಇ, ಆಸ್ಟ್ರೇಲಿಯಾ, ಯುಕೆ, ಇಯು ಸೇರಿದಂತೆ 38 ರಾಷ್ಟ್ರಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ. ಶೀಘ್ರದಲ್ಲೇ ಅಮೆರಿಕ ಜೊತೆಯೂ ಒಪ್ಪಂದ ಸಾಧ್ಯತೆಯಿದೆ. ಈ ಅವಕಾಶಗಳನ್ನು ಸಮರ್ಥವಾಗಿ ಬಳಸಿ ರಾಜ್ಯವನ್ನು 1 ಟ್ರಿಲಿಯನ್ ಡಾಲರ್ ಮೌಲ್ಯದ ಆರ್ಥಿಕತೆಯನ್ನಾಗಿ ಬೆಳೆಸುವ ಗುರಿ ಹೊಂದಿದೆ.
ರಫ್ತಿನಲ್ಲಿ ಮುಂಚೂಣಿ: ಸರಕು (ಮರ್ಕಂಡೈಸ್) ರಫ್ತಿನಲ್ಲಿ ಕರ್ನಾಟಕ ದೇಶದಲ್ಲೇ 4ನೇ ಸ್ಥಾನದಲ್ಲಿದೆ.
ಅವಕಾಶಗಳ ವಿಸ್ತರಣೆ: ಎಲೆಕ್ಟ್ರಾನಿಕ್ಸ್, ಕೃಷಿ-ಆಹಾರ ಉತ್ಪನ್ನಗಳು, ಜವಳಿ, ಔಷಧ, ಸಾಗರೋತ್ಪನ್ನಗಳು ಹಾಗೂ ಎಂಜಿನಿಯರಿಂಗ್ ಕ್ಷೇತ್ರಗಳ ರಫ್ತಿಗೆ ಹೊಸ ಒಪ್ಪಂದಗಳಿಂದ ಹೆಚ್ಚಿನ ಉತ್ತೇಜನ ಸಿಗಲಿದೆ.
ಉತ್ತಮ ಕೈಗಾರಿಕಾ ನೀತಿ: ಐಟಿ, ಬಿಟಿ, ಇವಿ, ಏರೋಸ್ಪೇಸ್, ಸೆಮಿಕಂಡಕ್ಟರ್ ಹಾಗೂ ಹಸಿರು ಇಂಧನ ಕ್ಷೇತ್ರಗಳಲ್ಲಿ ರಾಜ್ಯವು ಸಶಕ್ತ ನೀತಿಗಳನ್ನು ಜಾರಿಗೆ ತಂದಿದ್ದು, ಹೂಡಿಕೆ ಒಪ್ಪಂದಗಳು ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿವೆ.
ಕಾರ್ಯಾಗಾರದಲ್ಲಿ 200ಕ್ಕೂ ಹೆಚ್ಚು ಉದ್ಯಮಿಗಳು, ರಫ್ತುದಾರರು ಹಾಗೂ ಕೈಗಾರಿಕಾ ಇಲಾಖೆಯ ಉನ್ನತಾಧಿಕಾರಿಗಳು ಭಾಗವಹಿಸಿದ್ದರು.




