ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳು ಸಾರ್ವಜನಿಕರಿಂದ ತಿರಸ್ಕೃತರಾಗಿರುವುದನ್ನು ಅರಿತು, ದಾರಿ ತಪ್ಪಿಸುವ ನಿರೂಪಣೆಗಳ ಮೂಲಕ ದೇಶದಲ್ಲಿ ಗೊಂದಲ ಹಾಗೂ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿವೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ನೇತೃತ್ವದ ‘I.N.D.I.A’ ಒಕ್ಕೂಟವು ದೇಶವಿರೋಧಿ ಶಕ್ತಿಗಳನ್ನು ಪ್ರಚೋದಿಸುತ್ತಿದೆ. ಸಿಜೆಪಿಯ ಅಭಿಜೀತ್ ದೀಪ್ಕೆ ಹಾಗೂ ಆಶುತೋಷ್ ರಾಂಕಾಗೆ ಹಣಕಾಸಿನ ನೆರವು ನೀಡುತ್ತಿರುವುದು ಯಾರು? ‘ಆಪರೇಷನ್ ಸಿಂಧೂರ’ ಸಮಯದಲ್ಲಿ ರಾಂಕಾಗೆ ಪಾಕಿಸ್ತಾನದಿಂದ ಹಣ ಬಂದಿದೆ. ಅಲ್ಲದೆ, ಪ್ರಜಾಸತ್ತಾತ್ಮಕ ಸರ್ಕಾರಗಳನ್ನು ಉರುಳಿಸಲು ಸಂಶಯಾಸ್ಪದ ಸಂಘಟನೆಗಳಿಗೆ ಧನಸಹಾಯ ನೀಡುವ ಉದ್ಯಮಿ ಜಾರ್ಜ್ ಸೊರೊಸ್ ಅವರನ್ನು ರಾಹುಲ್ ಗಾಂಧಿ ಪದೇಪದೇ ಭೇಟಿಯಾಗುತ್ತಿರುವುದೇಕೆ ಎಂದು ತೀವ್ರವಾಗಿ ಪ್ರಶ್ನಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರ ಬದಲಾವಣೆಯಾಗಬೇಕಿರುವುದು ಚುನಾವಣೆಗಳ ಮೂಲಕವೇ ಹೊರತು ಪ್ರತಿಭಟನೆ ಅಥವಾ ಸಂಘರ್ಷಗಳಿಂದಲ್ಲ. ಜನರು ತಮ್ಮನ್ನು ಅಧಿಕಾರಕ್ಕೆ ತರುವುದಿಲ್ಲ ಎಂಬ ಹತಾಶೆಯಿಂದ ಕಾಂಗ್ರೆಸ್, ಬಾಂಗ್ಲಾದೇಶ ಮತ್ತು ನೇಪಾಳದ ದಂಗೆಗಳ ಮಾದರಿಯಲ್ಲೇ ಭಾರತದಲ್ಲೂ ಅರಾಜಕತೆ ತರಲು ಯತ್ನಿಸುತ್ತಿದೆ. ಆದರೆ, ದೇಶದ ನಾಗರಿಕರು ಇಂತಹ ಬೆಳವಣಿಗೆಗಳಿಗೆ ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.




